CPIML Liberation Karnataka

CPIML Liberation Karnataka
CPIML LIBERATION KARNATAKA

ಮಂಗಳವಾರ, ಸೆಪ್ಟೆಂಬರ್ 17, 2013

Working Class Struggles

CPI(ML) (Liberation)
9th Congress Documents – 1
2-8 Apr. 2013 Ranchi, Jharkhand

ಶ್ರಮಿಕ ವರ್ಗದ ಹೋರಾಟ ಕುರಿತ ಗೊತ್ತುವಳಿ:
ಸನ್ನಿವೇಶ, ಗುರುತರ ಕಾರ್ಯ ಮತ್ತು ಅವಕಾಶಗಳು
Translated in to Kannada by Prof. Lakshminarayana

1.    ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಿವಾರಣೆಯ ಹೆಸರಿನಲ್ಲಿ ನವ ಉದಾರವಾದೀ ಹೆಜ್ಜೆಗಳನ್ನಿಡುತ್ತಾ ಎರಗುತ್ತಿರುವ ‘ಬೇಟೆಗಾರ ಬಂಡವಾಳ’ ಶ್ರಮಿಕರ ಮೇಲಿನ ವಿವಿಧ ರೀತಿಯ ಆಕ್ರಮಣವನ್ನು ಪ್ರಪಂಚಾದ್ಯಂತ ತೀವ್ರಗೊಳಿಸಿದೆ. ನಮ್ಮ ದೇಶದಲ್ಲಿ ಇದು ಉದ್ಯೋಗ ಕಡಿತ, ಕೆಲಸದಿಂದ ಕಿತ್ತುಹಾಕುವುದು, ಸ್ವಯಂನಿವೃತ್ತಿ ಯೋಜನೆಗಳ ಹೆಸರಿನಲ್ಲಿ ಬಲಾತ್ಕಾರದ ನಿವೃತ್ತಿ, ವೇತನ ಸ್ಥಗಿತ, ಕಾರ್ಯಭಾರ ಮತ್ತು ಕೆಲಸದ ಅವಧಿಯನ್ನು ಹೆಚ್ಚಿಸುವುದು, ಖಾಯಂ ಅಥವಾ ನಿರಂತರವಾದ ಉದ್ಯೋಗಗಳ ಸಂಖ್ಯೆಯನ್ನೇ ಇಳಿಸುವುದು, ಹೊರಗುತ್ತಿಗೆ ಕೊಡುವುದು ಮತ್ತು ಹಂಗಾಮಿ ನೌಕರಿಯನ್ನಾಗಿಸುವುದು ಹೀಗೆ ಅಸಂಖ್ಯಾತ ಹಳೆಯ ಹಾಗೂ ಹೊಸ ವಿಧಾನಗಳ ರೂಪವನ್ನು ಪಡೆದುಕೊಂಡಿದೆ.
2.    ಶ್ರಮಿಕ ವಿರೋಧೀ ಕಾನೂನು ಮತ್ತು ಕಾಯಿದೆ-ಕಟ್ಟಳೆಗಳ ಸರಮಾಲೆ, ಶ್ರಮಿಕವಿರೋಧೀ ನ್ಯಾಯ ತೀರ್ಮಾನಗಳು, ಹೊಸ ಔದ್ಯೋಗಿಕ ಕೇಂದ್ರಗಳಲ್ಲಿ ಯೂನಿಯನ್ ರಹಿತ ವಲಯಗಳ ಸ್ಥಾಪನೆ, ಸರ್ಕಾರೀ ಮತ್ತು ಖಾಸಗೀ ಉದ್ಯಮಗಳಲ್ಲಿನ ಶ್ರಮಿಕ ಹೋರಾಟಗಳ ದೌರ್ಜನ್ಯಪೂರಿತ ದಮನ, ಹೀಗೆ ಹೆಚ್ಚುತ್ತಲೇ ಇರುವ ಶೋಷಣೆ ಮತ್ತು ದಮನಕ್ಕೆ, ಭಾರತ ರಾಜ್ಯಶಕ್ತಿ ಸಹಾಯ-ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕೆ ನ್ಯಾಯಾಂಗವೂ ಕೈಜೋಡಿಸಿದೆ. ಇದೆಲ್ಲವೂ ನಡೆಯುತ್ತಿರುವುದು ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ಹೆಸರಿನಲ್ಲಿ. ಕಾರ್ಪೊರೇಟ್ ಸುದ್ದಿಮಾಧ್ಯಮ ಸದಾ ಬೃಹತ್ ವ್ಯಾಪಾರಿಗಳ ರಾಗವನ್ನೇ ಹಾಡುತ್ತಾ ಶ್ರಮಿಕ ಸಂಘಟನೆ ಮತ್ತು ಮುಷ್ಕರಗಳು ರಾಷ್ಟ್ರದ ಪ್ರಗತಿಗೆ ಅಡ್ಡಗಾಲಾಗಿರುವ ಬೃಹತ್ ತೊಡಕುಗಳು ಎಂದು ಬಿಂಬಿಸುತ್ತಿದೆ.
3.    ಶ್ರಮಿಕರು ಮತ್ತು ಉದ್ಯೋಗಿಗಳು, ಫ್ಯಾಕ್ಟರಿ/ಶ್ರಮಕೇಂದ್ರಗಳಲ್ಲಿ, ಉದ್ಯಮ ಮತ್ತು ರಾಷ್ಟ್ರಮಟ್ಟಗಳಲ್ಲಿ ಏನೇ ಆದರೂ ಹಿಮ್ಮೆಟ್ಟಬಾರದೆಂಬ ದೃಢತೆಯಿಂದ ಈ ವ್ಯವಸ್ಥಿತ ಆಕ್ರಮಣವನ್ನು ಪ್ರತಿರೋಧಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಸಂಘಟಿತ ಶ್ರಮಿಕರಲ್ಲಿ ಮತ್ತು ಗುತ್ತಿಗೆ ಕಾರ್ಮಿಕರಲ್ಲಿ ಅದರಲ್ಲೂ ನಮ್ಮ ಶ್ರಮಿಕ ಶಕ್ತಿಯ ಸಿಂಹಪಾಲೆನಿಸಿರುವ ಮಹಿಳೆಯರಲ್ಲಿ ಹೋರಾಟದ ಒಂದು ಹೊಸ ಜಾಗೃತಿ ಕಾಣಿಸಿಕೊಂಡಿದೆ. ‘ಉದಯಿಸುತ್ತಿರುವ ನವಭಾರತದ ಪ್ರತೀಕ’ ವೆಂದು ಪ್ರದರ್ಶಿಸುವ ಮೋಟಾರು ಉದ್ಯಮದ ಕಾಯಂ ನೌಕರರು ಮತ್ತು ಗುತ್ತಿಗೆ ನೌಕರರು ಆದರ್ಶರೀತಿಯಲ್ಲಿ ಜೊತೆಗೂಡಿ ನಡೆಸುತ್ತಿರುವ ಹೋರಾಟಗಳೂ ಇದೇ ಅವಧಿಯಲ್ಲಿ ಕಂಡುಬರುತ್ತಿವೆ. ಹಾಗೆಯೇ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜೊತೆಗೂಡಿ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಔದ್ಯೋಗಿಕ ಚಳವಳಿಗಳು ಮತ್ತು ರಾಜಕೀಯ ಪ್ರಚಾರಾಂದೋಲನಗಳು ಇತ್ತೀಚಿನ ದಿನಗಳ ಮಹತ್ವದ ಬೆಳವಣಿಗೆಗಳಾಗಿವೆ. ಎಲ್ಲಾ ಕಡೆ ವ್ಯಾಪಿಸುತ್ತಿರುವ ನವ ಉದಾರವಾದದ ಬಿಕ್ಕಟ್ಟುಗಳು ಒದಗಿಸಿರುವ ಮಹತ್ತರ ಸದವಕಾಶಗಳು ಹಾಗೂ ಕಠಿಣತಮ ಸವಾಲುಗಳ ಹಾದಿಯಲ್ಲಿ ಈಗಾಗಲೇ ಕ್ರಮಿಸುತ್ತಿರುವ ಗ್ರೀಸ್, ಸ್ಪೇನ್, ದಕ್ಷಿಣ ಆಫ್ರಿಕ ಮತ್ತಿತರ ದೇಶಗಳ ಶ್ರಮಿಕರೊಂದಿಗೆ ವಿಶ್ವಶ್ರಮಿಕಸೇನೆಯ ಅಂಗವಾದ ಭಾರತದ ಶ್ರಮಿಕರೂ ದೃಢ ದಾಪುಗಾಲು ಹಾಕುತ್ತಿದ್ದಾರೆ.

ಭಾರತದ ಬೆಳವಣಿಗೆಯ ಕತೆ: ಪಡಕೊಂಡವರು ಮತ್ತು ಕಳಕೊಂಡವರು
4.    1990ರ ದಶಕದ ಮಧ್ಯಭಾಗ ಮತ್ತು 2000 ದ ಕೆಲವೇ ವರ್ಷಗಳ ಅವಧಿಯಲ್ಲಿ ಸಂಭವಿಸಿ ಈಗ ಕ್ಷೀಣಿಸುತ್ತಿರುವ ಅಧಿಕ ಉತ್ಪಾದನೆಯ ಬೆಳವಣಿಗೆ ಶ್ರಮಿಕರ ಉತ್ಪಾದನೆಯ ವರ್ಧನೆಯಿಂದ ಆದದ್ದು. ಆದರೆ ಆ ಬೆಳವಣಿಗೆಯ ಫಲ ಶ್ರಮಿಕರಿಗೆ ಸಿಗಲಿಲ್ಲ. 80 ರ ದಶಕದಲ್ಲಿ ಉತ್ಪಾದನಾ ವಲಯಕ್ಕೆ ಸೇರಿಸಿದ ನಿವ್ವಳ ಮೌಲ್ಯದ ಪಾಲಿನಲ್ಲಿ ಶೇಕಡ 30 ರಷ್ಟು ಇದ್ದ ಕೂಲಿ, 90 ರ ದಶಕದಲ್ಲಿ ಶೇಕಡ 20 ಕ್ಕೆ ಇಳಿದು 2008-2009ರ ಹೊತ್ತಿಗೆ ಶೇಕಡ 10ಕ್ಕೆ ಕುಸಿಯಿತು. ನಿವ್ವಳ ಮೌಲ್ಯಕ್ಕೆ ಕೂಡಿಸಿದ ಲಾಭದ ಪಾಲು 80 ರ ದಶಕದುದ್ದಕ್ಕೂ ಶೇಕಡ 20 ರಷ್ಟು ಇದ್ದುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅದೇ 90ರ ದಶಕದಲ್ಲಿ ಶೇಕಡ 30 ಕ್ಕಿಂತಲೂ ಮೇಲೇರಿ 2008 ರ ಹೊತ್ತಿಗೆ ಊಹೆಗೂ ನಿಲುಕದ ಶೇಕಡ 60 ಕ್ಕೆ ಏರಿತು. ಸೇವಾವಲಯದಲ್ಲೂ ಇದೇ ಕತೆ ಪುನರಾವರ್ತನೆಯಾಯಿತು. 80 ರ ದಶಕದಲ್ಲಿ ನಿವ್ವಳ ಮೌಲ್ಯದಲ್ಲಿನ ವೇತನದ ಪಾಲು ಶೇಕಡಾ 70 ಕ್ಕಿಂತಲೂ ಅಧಿಕವಾಗಿತ್ತು. 2009ರ ಹೊತ್ತಿಗೆ ಶೇಕಡಾ 50 ಕ್ಕಿಂತಲೂ ಕಡಿಮೆಯಾಯಿತು. ಆದರೆ 1990 ರಲ್ಲಿ ಶೇಕಡಾ 30 ರಷ್ಟಿದ್ದ ಲಾಭದ ಪಾಲು 2004-2005 ರ ಹೊತ್ತಿಗೆ ಶೇಕಡಾ 50 ಕ್ಕಿಂತಲೂ ಅಧಿಕವಾಯಿತು
5.    ನೈಜವೇತನ ಸ್ಥಗಿತಗೊಂಡು ಕಡಿಮೆಯಾಗುತ್ತಿದ್ದಂತೆ ಎಲ್ಲಾ ಕಂಪೆನಿಗಳ ಮೇಲಧಿಕಾರಿಗಳು ತಮ್ಮ ವೇತನ ಮತ್ತು ಭತ್ಯೆಗಳನ್ನು ಹಿಗ್ಗಾ ಮುಗ್ಗಾ ಹೆಚ್ಚಿಸಿಕೊಂಡರು. 1990 ರಲ್ಲಿ ಶ್ರಮಿಕರ ವೇತನದ ಎರಡು ಪಟ್ಟು ಇದ್ದ ಮೇನೇಜ್ ಮೆಂಟಿನ ಸಿಬ್ಬಂದಿಯ ವೇತನ ತದನಂತರ ಕ್ಷಿಪ್ರಗತಿಯಲ್ಲಿ ವೃದ್ಧಿಸುತ್ತಾ 2008 ರ ಹೊತ್ತಿಗೆ 4.3 ಪಟ್ಟು ಹೆಚ್ಚಾಯಿತು. ಸಿಇಒ ಗಳು ಅಸಹ್ಯಹುಟ್ಟಿಸುವಷ್ಟು ಅಧಿಕವೇತನವನ್ನು- ಕೆಲವರು ದಿನವೊಂದಕ್ಕೆ 10 ಲಕ್ಷರೂಗಳಿಗೂ ಅಧಿಕ ವೇತನವನ್ನು ಈಗ ಪಡೆಯುತ್ತಿದ್ದಾರೆ. 2011-12 ರಲ್ಲಿ ನವೀನ್ ಜಿಂದಾಲ್ 73.42 ಕೋಟಿರೂ ವೇತನವನ್ನು ಪಡೆದರು. ಸನ್ ನೆಟ್ ವರ್ಕ್ ನ ಕಲಾನಿಧಿ ಮತ್ತು ಕಾವೇರಿ ಕಲಾನಿಧಿ ತಲಾ 57.1 ಕೋಟಿರೂ ವೇತನವನ್ನು ಪಡೆದರು. ಹೀರೋ ಮೋಟಾರ್ ಕಾರ್ಪೊರೇಶನ್ನಿನ ಪವನ್ ಮುನ್ಜಾಲ್ ಮತ್ತು ಬೃಜ್ ಮುನ್ಜಾಲ್ ತಲಾ 34.55 ಕೋಟಿ ರೂ. ವೇತನವನ್ನು ಪಡೆದರು. ಮದ್ರಾಸ್ ಸಿಮೆಂಟ್ ಕಂಪೆನಿಯ ಪಿ.ಆರ್.ರಾಜಾ 29.34 ಕೋಟಿ ರೂ ವೇತನ ಪಡೆದರೆ, ಮಾರುತಿ ಸುಜುಕಿಯ ಶಿನ್ಜೊ ನಾಗಸಾಕಿ 58.12 ಕೋಟಿ ರೂ ವೇತನ ಪಡೆದರು.
6.    ಗಗನಕ್ಕೇರಿಸಿದ  ಲಾಭಗಳು, ರಾಜ್ಯ ಮತ್ತು ಕೇಂದ್ರಸರ್ಕಾರಗಳು ಕೊಟ್ಟ ಕರ ರಿಯಾಯತಿಗಳು ಮತ್ತಿತರ ಸಹಾಯಧನಗಳಿಂದಾಗಿ ಮತ್ತಷ್ಟು ಊದಿಕೊಂಡವು. ಕಳೆದ ಐದುವರ್ಷಗಳಲ್ಲಿ ಕೊಟ್ಟ ಕರ ರಿಯಾಯತಿಗಳ ಒಟ್ಟು ಮೊತ್ತ 25 ಲಕ್ಷ ಕೋಟಿರೂಗಳಷ್ಟಾಗಿದೆ. ಶೇಕಡಾ 70 ಕ್ಕಿಂತಲೂ ಅಧಿಕ ಭಾರತೀಯರು ದಿನಂಪ್ರತಿ 20 ರೂಗಳಿಗಿಂತಲೂ ಕಡಿಮೆ ವೆಚ್ಚದಲ್ಲಿ ಜೀವನ ನೂಕುತ್ತಿರುವಾಗ ಇದು ಬಹಿರಂಗವಾಗಿ ಮತ್ತು ಕಾನೂನುಬದ್ಧವಾಗೇ ನಡೆಸಿದ ಅತ್ಯಂತ ದೊಡ್ಡ ಹಗರಣ. ದೊಡ್ಡ ಮೊತ್ತದ ಕರ ರಿಯಾಯತಿಗಳನ್ನು ಪಡೆಯುತ್ತಿರುವ ಶ್ರೀಮಂತರು ಇದು ಸಾಲದೆಂಬಂತೆ ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಸಂಪತ್ತನ್ನು ಶೇಖರಿಸಲು, ವಿವಿಧ ಮಾರ್ಗಗಳಲ್ಲಿ ಕಪ್ಪುಹಣವನ್ನು ಬಿಳಿಯಾಗಿಸುವ ವಹಿವಾಟನ್ನು ನಡೆಸಲು ಅನುಕೂಲವಾಗುವಂತೆ ಸಾಕಷ್ಟು ಸಂದುಗೊಂದುಗಳನ್ನು ಕಾನೂನುಗಳಲ್ಲಿ ಕಲ್ಪಿಸಲಾಗಿದೆ.

ಶ್ರಮಿಕವರ್ಗ: ಬದಲಾಗುತ್ತಿರುವ ಸಂರಚನೆ
7.    ದೇಶದ ಜಿಡಿಪಿ ಯ ಮಿಶ್ರಣ ಬದಲಾಗುತ್ತಿರುವಹಾಗೆ ಅದೇ ಪ್ರಮಾಣದಲ್ಲಿ ಅಲ್ಲದಿದ್ದರೂ ಶ್ರಮಿಕವರ್ಗದ ಸಂರಚನೆ ಸಹ ಒಂದೇಸಮನೆ ಬದಲಾಗುತ್ತಿದೆ. ಈಗ ಜಿಡಿಪಿಯಲ್ಲಿನ ಕೃಷಿಯ ಪಾಲು ಶೇಕಡಾ 15 ಕ್ಕಿಂತ ಕಡಿಮೆ. ಹೀಗಿದ್ದರೂ ಹತ್ತಿರ ಹತ್ತಿರ ಶೇಕಡಾ 60 ರಷ್ಟು ಜನರು ತಮ್ಮ ಆರ್ಥಿಕ ಪೂರೈಕೆಗಳಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಷ್ಟ್ರೀಯ ಒಟ್ಟು ಉತ್ಪನ್ನದಲ್ಲಿ ಶೇಕಡಾ 59 ರಷ್ಟೆಂದು ಲೆಕ್ಕಕ್ಕೆ ಸಿಗುವ ಸೇವಾವಲಯ ಈಗ ಭಾರತದ ಆರ್ಥಿಕತೆಯಲ್ಲಿ ಮೇಲುಗೈ ಪಡೆದಿದೆ. ಕಳೆದ 40 ವರ್ಷಗಳಲ್ಲಿ ಸೇವಾವಲಯದಲ್ಲಿ ಉದ್ಯೋಗಾವಕಾಶ ವರ್ಷಕ್ಕೆ ಸರಾಸರಿ 3.5 ರಂತೆ ವೃದ್ಧಿಯಾಗಿದೆ. ಹೀಗಿದ್ದರೂ ಒಟ್ಟು ಉದ್ಯೋಗಾವಕಾಶದಲ್ಲಿ ಇದರ ಪಾಲು 1972-73 ರಲ್ಲಿ ಇದ್ದ ಶೇಕಡಾ ಸುಮಾರು 15 ರಿಂದ 2009-10 ರಲ್ಲಿ ಕೇವಲ ಶೇಕಡಾ 26 ಕ್ಕೆ ಏರಿದೆ.
8.    ಪ್ರಾಥಮಿಕ ವಲಯ ಅಥವಾ ಕೃಷಿ ವಲಯದಲ್ಲಿನ ಉದ್ಯೋಗಾವಕಾಶ ಒಂದೇಸಮನೆ ಕುಸಿಯುತ್ತಿದೆ. ಗಣಿಗಾರಿಕೆ, ಕೈಗಾರಿಕೋತ್ಪಾದನೆ, ವಿದ್ಯುತ್, ನೀರು, ಅನಿಲ ಮತ್ತು ಕಟ್ಟಡ ನಿರ್ಮಾಣವನ್ನೊಳಗೊಂಡ ಉದ್ಯೋಗಾವಕಾಶದ ದ್ವಿತೀಯ ವಲಯದಲ್ಲಿ, ಕೇವಲ ಕಟ್ಟಡ ನಿರ್ಮಾಣದಲ್ಲಿ ಮಾತ್ರ ಉದ್ಯೋಗವಕಾಶ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ತೃತೀಯ ವಲಯ ಅಥವಾ ಸೇವಾವಲಯದಲ್ಲಿ, ಮೂಲತಹ, ಹಣಕಾಸು ಸೇವೆ, ವ್ಯಾಪಾರ ಮತ್ತು ಸಾಗಣೆ ಈ ಮೂರು ಘಟಕಗಳಲ್ಲಿ ಮಾತ್ರ ಉದ್ಯೋಗಾವಕಾಶಗಳು ಕೇಂದ್ರೀಕೃತವಾಗಿವೆ.
9.    ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ನಗರಪ್ರದೇಶಗಳಲ್ಲೇ ಉದ್ಯೋಗಾವಕಾಶಗಳು ಹೆಚ್ಚಿವೆ. ಗ್ರಾಮೀಣ ಆರ್ಥಿಕತೆಯಲ್ಲಿ ಉದ್ಯೋಗಾವಕಾಶಗಳ ಏರಿಕೆ ಕಡಿಮೆ. ಗ್ರಾಮೀಣ ಉದ್ಯೋಗಾವಕಾಶಗಳು ಸ್ಥಗಿತಗೊಂಡಿರುವುದಕ್ಕೆ ಮೂಲ ಕಾರಣ ಕೃಷಿಮೂಲದ ಉದ್ಯೋಗಾವಕಾಶ ಕುಸಿದಿರುವುದೇ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇತರ ಉದ್ಯೋಗಾವಕಾಶಗಳು ಒಂದೇ ಸಮನೆ ಹೆಚ್ಚುತ್ತಿದ್ದಾಗ್ಯೂ ಕೃಷಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಲೇ ಇವೆ. ಎನ್ಎನ್ಎಸ್ಒ ಮಾಡಿರುವ ಸಮೀಕ್ಷೆಗಳ ಅಂದಾಜುಗಳ ಪ್ರಕಾರ 1972-73 ರಲ್ಲಿ ಕೃಷಿಯೇತರ ಕೆಲಸಗಳಿಗಾಗಿ ನೇಮಕಗೊಂಡ ಶ್ರಮಿಕರ ಸಂಖ್ಯೆ 28.51 ದಶಲಕ್ಷ. 1987-88 ರ ಹೊತ್ತಿಗೆ ಇದು 56.11 ಕ್ಕೆ ಏರಿತ್ತು. 2004-05 ರಲ್ಲಿ 93.53 ದಶಲಕ್ಷವನ್ನು ದಾಟಿ, ಅದೇ ವರ್ಷ 107.51 ದಶಲಕ್ಷ ಆಗಿತ್ತು.
11. GzÉÆåÃUÁªÀPÁ±ÀzÀ ¨É¼ÀªÀtÂUÉAiÀÄ PÀĹvÀzÀ F MlÄÖ avÀæzÀ°è MAzÉgÀqÀÄ CA±ÀUÀ¼ÀÄ JzÀÄÝPÁtÄvÀÛªÉ. ªÉÆzÀ®£ÉAiÀÄzÁV fr¦AiÀÄ°è vÀ£Àß ªÀĺÀvÀé vÀ¼ÀªÀÄÄnÖzÀgÀÆ, ಕೃಷಿಯೇತರ ಕ್ಷೇತ್ರಗಳು ಶ್ರಮಿಕರು ಕೃಷಿಯಿಂದ ದೂರ ಸರಿಯುವಷ್ಟು ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿಲ್ಲವಾದ್ದರಿಂದ ಮಹತ್ತರವಾದ ಶ್ರಮಿಕಶಕ್ತಿಯ ಪಲ್ಲಟವೇನೂ ಸಂಭವಿಸದೆ PÀȶ ªÀiÁvÀæ CvÀåAvÀ ºÉaÑ£À GzÉÆåÃUÀ MzÀV¸ÀĪÀ PÉëÃvÀæªÁV ªÀÄÄAzÀĪÀgɬÄvÀÄ. ಎರಡನೆಯದಾಗಿ, ಉದ್ಯೋಗಾವಕಾಶದ ಬೆಳವಣಿಗೆ, ಅಲ್ಪಾದಾಯ ಮತ್ತು ಕೆಟ್ಟ ಸ್ಥಿತಿಯ ಉದ್ಯೋಗ ಲಕ್ಷಣಗಳ ಅಸಂಘಟಿತ ಮತ್ತು ಅನೌಪಚಾರಿಕ ವಲಯಗಳ ಉದ್ಯೋಗಗಳಿಂದ ಸಾಧ್ಯವಾಯಿತು. ಮತ್ತು ಮೂರನೆಯದಾಗಿ, ಸಂಘಟಿತ ವಲಯದಲ್ಲಿ  ಉದ್ಯೋಗಾವಕಾಶದ ವೃದ್ಧಿ ಬಹುಮಟ್ಟಿಗೆ, ದಿನಗೂಲಿ ಮತ್ತು ಗುತ್ತಿಗೆ ಉದ್ಯೋಗಗಳ ವಿಭಾಗಗಳಲ್ಲಿ  ಆಯಿತು. ಒಟ್ಟಾರೆ ಸುಮಾರು 1.3 ಕೋಟಿ ಶ್ರಮಿಕರು ಪ್ರತಿವರ್ಷ ಶ್ರಮಿಕ ಸಮುದಾಯಕ್ಕೆ ಸೇರ್ಪಡೆಯಾದರೆಂದು ಅಂದಾಜಿಸಬಹುದು. ಅವರಲ್ಲಿ ಎಂಭತ್ತು ಲಕ್ಷ ಉದ್ಯೋಗಿಗಳು ಕಡಿಮೆ ವೇತನದ ಅಸಂಘಟಿತ ವಲಯಕ್ಕೆ ಸೇರ್ಪಡೆಯಾದರೆ, ಐವತ್ತು ಲಕ್ಷ ಶ್ರಮಿಕರು ದಿನಗೂಲಿ ಉದ್ಯೋಗಿಗಳ ಗುಂಪಿಗೆ ಸೇರಿದ್ದಾರೆ ಅಥವಾ  ನಿರುದ್ಯೋಗಿಗಳಾಗಿ ಉಳಿದಿದ್ದಾರೆ.

ತೀವ್ರ ದಾಳಿಗೆ ತುತ್ತಾದ ಶ್ರಮಿಕ ವರ್ಗ:
12. ವೇತನ ಶ್ರಮದ ತೀವ್ರತಮ ಶೋಷಣೆ ವಿವಿಧ ರೀತಿಯಲ್ಲಿ ಆಗುತ್ತದೆ. ಅತ್ಯಾಧುನಿಕ ಮತ್ತು ತೀವ್ರವೇಗದ ಯಂತ್ರೋಪಕರಣಗಳ ಸ್ಥಾಪನೆಯಿಂದ ಸಾಪೇಕ್ಷ ಮಿಗುತೆ ಮೌಲ್ಯದಲ್ಲಿ ಹೆಚ್ಚಳವಾಗುತ್ತದೆ. ಅಲ್ಲದೆ ಶ್ರಮದ ಅವಧಿಯನ್ನು ನಾನಾ ವಿಧಗಳಲ್ಲಿ ಹೆಚ್ಚಿಸಿ-ಉದಾಹರಣೆಗೆ ಶ್ರಮಿಕರಿಗೆ ಲಭ್ಯವಿರುವ ವಿರಾಮದಲ್ಲಿ ಕಡಿತ ಮಾಡಿ ಮತ್ತು ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಿ-ಶ್ರಮಿಕರ ಶ್ರಮದಿಂದ ಹೆಚ್ಚಿನ ಆತ್ಯಂತಿಕ ಮಿಗುತೆ ಮೌಲ್ಯವನ್ನು ಹಿಂಡಿ ತೆಗೆಯುತ್ತಾರೆ. ಎರಡನೆಯದಾಗಿ, ವೇತನ ಪಾವತಿಯ ಭಾರವನ್ನು ಕಡಿಮೆ ಮಾಡಲು ಖಾಯಂ ಉದ್ಯೋಗಗಳಿಗೂ ದಿನಗೂಲಿ/ಗುತ್ತಿಗೆ ಆಧಾರದ ವೇತನವನ್ನು ವ್ಯಾಪಕವಾಗಿ ಬಳಸುತ್ತಾರೆ. ಈ ಕ್ರಮ ಕಾನೂನಿಗೆ ವಿರುದ್ಧವಾಗಿದ್ದರೂ ಸಹ ವೃದ್ಧಿಸುತ್ತಲೇ ಇರುವ ದೊಡ್ಡ ಸಂಖ್ಯೆಯ ಔದ್ಯೋಗಿಕ ಶ್ರಮಿಕರ ಪಡೆ ಇರುವುದರಿಂದ ಚಾಲ್ತಿಯಲ್ಲಿದೆ. ಇದರಿಂದಲೇ ಸಾಮಾನ್ಯ ವೇತನದ ಮಟ್ಟವೂ ಕುಸಿದಿದೆ. ಮೂರನೆಯದಾಗಿ , ನೈಜವೇತನವನ್ನು ಅಳಿಸಿಹಾಕಲು ಅಥವಾ ಸ್ಥಗಿತಗೊಳಿಸಲು, ವೇತನ ಆಯೋಗಗಳ ನೇಮಕ, ದ್ವಿಪಕ್ಷೀಯ/ತ್ರಿಪಕ್ಷೀಯ ವೇತನ ಒಪ್ಪಂದಗಳನ್ನು  ದಿನಕಳೆದಂತೆ ಹೆಚ್ಚು ಹೆಚ್ಚು ನಿಧಾನಮಾಡುತ್ತಿದ್ದಾರೆ, ಗೊತ್ತಾಗದಂತೆ ಧ್ವಂಸಮಾಡುತ್ತಿದ್ದಾರೆ, ಅಷ್ಟೇ ಅಲ್ಲ, ಮುರಿಯುತ್ತಿದ್ದಾರೆ ಸಹ.
13. ಏಕಾಏಕಿ ಅಲ್ಲದಿದ್ದರೂ ಹಂತ ಹಂತವಾಗಿ, ಹಿಂಬಾಗಿಲಿನ ಮೂಲಕ, ಸಾರ್ವಜನಿಕ ಉದ್ಯಮ ಮತ್ತು ಅರೆಸರ್ಕಾರಿ ಉದ್ಯಮಗಳ ಖಾಸಗೀಕರಣ ಹಿಂದೆಂದಿಗಿಂತಲೂ ತೀವ್ರವಾಗಿ, ವ್ಯಾಪಕವಾಗಿ ನಡೆಯುತ್ತಿದೆ. ಇದು ಸಂಬಂಧಿತ ಶ್ರಮಿಕರ ಭವಿಷ್ಯವನ್ನು ಅತಂತ್ರಗೊಳಿಸುತ್ತಿರುವುದು ಮಾತ್ರವಲ್ಲ, ಧಿಡೀರ್ ಉದ್ಯೋಗ ಕಡಿತ, ವೇತನ ಕಡಿತ ಮತ್ತು ಅತಿ ಕೆಟ್ಟ ಉದ್ಯೋಗ ಪರಿಸರಕ್ಕೆ ದಾರಿಮಾಡಿಕೊಡುತ್ತಿದೆ.
14. ವಿಶೇಷ ಆರ್ಥಿಕ ವಲಯಗಳಲ್ಲದೆ, ಹರಿಯಾಣದ ಗುರುಗಾಂವ್-ಮಣೆಸರ್ ವಲಯ, ರದ್ರಾಪುರ ಮತ್ತು ಉತ್ತರಾಖಂಡದ ಇತರ ಭೂಪ್ರದೇಶಗಳಲ್ಲಿನ ವಲಯ ಮತ್ತು ಚೆನ್ನೈನ ಶ್ರೀಪೆರಂಬದೂರು ವಲಯಗಳನ್ನೂ ‘ಶ್ರಮಿಕ ಸಂಘಟನಾ ರಹಿತ ವಲಯ’ಗಳನ್ನಾಗಿ ಪರಿವರ್ತಿಸಲಾಗಿದೆ. ಈ ವಲಯಗಳಲ್ಲಿ ಶ್ರಮಿಕ ಸಂಘಟನೆಗಳನ್ನು ನೋಂದಾಯಸುವಂತಿಲ್ಲ. ಶ್ರಮಿಕ ಸಂಘಟನೆಗಳನ್ನು ಸ್ಥಾಪಿಸುವುದಾಗಲಿ, ಶ್ರಮಿಕರು ಅವನ್ನು ಸೇರುವುದಾಗಲಿ ಇಲ್ಲಿ ನಿಷಿದ್ಧ. ಬಹುಕಾಲದಿಂದಲೂ ಬೇರೂರಿರುವ ಶ್ರಮಿಕಸಂಘಟನೆಯ ಸಂಸ್ಕೃತಿಯ ಸಂಘಟಿತ ವಲಯದಲ್ಲೂ ಹೋರಾಟದ ಮನಸ್ಸಿನ, ಜನಮನ್ನಣೆ ಗಳಿಸಿದ ಶ್ರಮಿಕ ಸಂಘಟನೆಯನ್ನು ಅಧಿಕೃತ ಸಂಘಟನೆಯೆಂದು ಮಾನ್ಯಮಾಡಲು ಎಷ್ಟೋ ವೇಳೆ ಆಡಳಿತ ಮಂಡಳಿ ನಿರಾಕರಿಸುತ್ತದೆ. ಆಡಳಿತ ಮಂಡಳಿಯ ಪರವಾದ ಕೈಗೊಂಬೆ ಸಂಘಟನೆಗಳಿಗೆ ಮಾತ್ರ ಮಾನ್ಯತೆ ದೊರೆಯುತ್ತದೆ.
15. ಹೀಗೆ, ಕಷ್ಟಪಟ್ಟು ಸಂಪಾದಿಸಿಕೊಂಡ ಟ್ರೇಡ್ ಯೂನಿಯನ್ ಹಕ್ಕುಗಳ ನಿರಾಕರಣೆಯನ್ನೇ ವಿಶೇಷವಾಗಿ ಗುರಿಯಾಗಿಸಿ ಔದ್ಯೋಗಿಕ ಪ್ರಜಾತಂತ್ರವನ್ನು ಹತ್ತಿಕ್ಕುವ ಬಂಡವಾಳಶಾಹಿಯ ಈ ಕ್ರಮ, ತನ್ನ ವರ್ಗವಿರೋಧಿಯನ್ನು ತುಳಿದಿಡಲು, ಶ್ರಮಿಕರು ಹೋರಾಟದ ಸಂಘಟಿತ ಶಕ್ತಿಯಾಗಿ ಎದ್ದುನಿಲ್ಲದಂತೆ ತಡೆಯಲು, ಬಂಡವಾಳಶಾಹಿಯು ತನ್ನ ಕೈಯ್ಯಲ್ಲಿಟ್ಟುಕೊಂಡಿರುವ,  ಶ್ರಮಿಕರ ವಿರುದ್ಧ ಅತ್ಯಂತ ವ್ಯಾಪಕವಾಗಿ ಬಳಸುವ, ಒಂದು ರಾಜಕೀಯ ಅಸ್ತ್ರವಾಗಿದೆ. ಆದ್ದರಿಂದ ಶ್ರಮದ ಘನತೆಯ ಪ್ರಶ್ನೆಯೊಂದಿಗೆ ಸೇರಿಕೊಂಡ ಈ ಸಂಗತಿಗಳು ಶ್ರಮಿಕ ವರ್ಗದ ಹೋರಾಟದ ಅತ್ಯಂತ ಮುಖ್ಯ ಕಾಳಜಿಗಳಾಗಿ ಇಂದು ಹೊರಹೊಮ್ಮಿವೆ.

ಶ್ರಮಿಕರ ಹೋರಾಟದಲ್ಲಿನ ತೀಕ್ಷ್ಣ ಅಂಶಗಳು
16.  ಇತ್ತೀಚಿನ ವರ್ಷಗಳಲ್ಲಿ ಕೇಂದ್ರೀಯ ಟ್ರೇಡ್ ಯೂನಿಯನ್ ಗಳು ಮತ್ತು ಫೆಡರೇಶನ್ ಗಳು ಮತ್ತು ಜಂಟಿಯಾಗಿ ರಾಷ್ಟ್ರೀಯ ಆಂದೋಲನಗಳನ್ನು ಮತ್ತೆ ಮತ್ತೆ ಸಂಘಟಿಸಿವೆ. ಶ್ರಮಿಕ ಸಮುದಾಯದ ಒತ್ತಡದಿಂದಾಗಿ ಕಾಂಗ್ರೆಸ್ ಮತ್ತು ಭಾಜಪಗಳಿಗೆ ನಿಷ್ಠೆ ಹೊಂದಿರುವ ಟ್ರೇಡ್ ಯೂನಿಯನ್ ಗಳೂ ಸಹ ಈ ಆಂದೋಲನಗಳಲ್ಲಿ ಭಾಗಿಯಾಗಬೇಕಾಯಿತು. ಎಲ್ಲಾ ಟ್ರೇಡ್ ಯೂನಿಯನ್ ಗಳೂ ಕೇಂದ್ರೀಯವಾಗಿ ಅಥವಾ ವಿಭಾಗ ಮಟ್ಟದಲ್ಲಿ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗುವುದು ಇಂದಿನ ಕಾಲಘಟ್ಟದ ವಿಶೇಷ ಲಕ್ಷಣವಾಗಿದೆ. ಇಂಥ ವಿಶಾಲ ಶ್ರಮಿಕ ಐಕ್ಯತೆಯಿಂದ ಅನುಕೂಲಕರ ವೇದಿಕೆ ಸಾಧ್ಯ. ಮತ್ತು ಇದನ್ನು ಬಳಸಿಕೊಂಡು ವರ್ಗಹೋರಾಟವನ್ನು ಹರಿತ ಹಾಗೂ ತೀವ್ರಗೊಳಿಸಿ ಖಾಸಗೀಕರಣ ಮತ್ತು ಉದಾರೀಕರಣದ ನೀತಿಗಳನ್ನು ಹಿಂದಕ್ಕೆ ಪಡೆಯುವಂತೆ ಸಂಯುಕ್ತ ಶ್ರಮಿಕವರ್ಗದ ತೀರ್ಮಾನವನ್ನು ಬಲಯುತವಾಗಿ ಪ್ರತಿಪಾದಿಸಬಹುದು.
17. ಪರಸ್ಪರ ಅವಿಭಾಜ್ಯ ಸಂಬಂಧ ಹೊಂದಿರುವ ಮೋಟಾರು ಉದ್ಯಮ ಮತ್ತು ಮೋಟಾರು ಬಿಡಿಭಾಗಗಳ ಉದ್ಯಮಗಳು ಜೊತೆಗೂಡಿ ಭಾರತದಲ್ಲಿನ ವರ್ಗಹೋರಾಟದ ಅತ್ಯಂತ ಚಲನಶೀಲ ತೀಕ್ಷ್ಣ ಅಂಶವಾಗಿ ಹೊರಹೊಮ್ಮಿದೆ. ಮಹೀಂದ್ರ (ನಾಸಿಕ್), ಸನ್ ಬೀಮ್ ಆಟೊ (ಗುರ್ ಗಾಂವ್), ಬೋಷ್ ಛಾಸಿಸ್ (ಪುಣೆ), ಹೊಂಡ ಮೋಟರ್ ಸೈಕಲ್ (ಮಣೆಸರ್), ರೀಕೊ ಆಟೊ ( ಗುರ್ ಗಾಂವ್), ಪ್ರಿಕೋಲ್ (ಕೊಯಮತ್ತೂರು), ವೋಲ್ವೊ (ಹೊಸಕೋಟೆ, ಕರ್ನಾಟಕ), ಎಂಆರ್ಎಫ್ ಟೈರ್ಸ್ (ಚೆನ್ನೈ), ಜೆನರಲ್ ಮೋಟಾರ್ಸ್ (ಹಾಲೋಲ್, ಗುಜರಾತ್), ಮಾರುತಿ ಸುಜುಕಿ (ಮಣೆಸರ್), ಬೋಷ್ (ಬೆಂಗಳೂರು), ಡನ್ಲಪ್ (ಹೋಗ್ಲಿ, ಚೆನ್ನೈ), ಕ್ಯಾಪರೊ, ಹ್ಯೂನ್ದಾಯ್ (ಶ್ರೀಪೆರಂಬದೂರ್)-ಹೀಗೆ ಬಹುತೇಕ  ಎಲ್ಲ ಪ್ರಸಿದ್ಧ ಮೋಟಾರು ಉದ್ಯಮಗಳ ಘಟಕಗಳಲ್ಲೂ 2007 ರಿಂದ 2012 ರ ಅವಧಿಯಲ್ಲಿ ಶ್ರಮಿಕರ ಮುಷ್ಕರಗಳು ನಡೆದವು.
18. ಮೋಟಾರು ವಾಹನ ಉದ್ಯಮ ಒಟ್ಟಾರೆ ಮತ್ತು ವ್ಯಕ್ತಿಗತ ಶ್ರಮಿಕ ಉತ್ಪಾದನೆಯಲ್ಲಿ ಅಸಾಧಾರಣ ಬೆಳವಣಿಗೆಯನ್ನು ಸಾಧಿಸಿದೆ. 2004-05 ರಲ್ಲಿ ಎಲ್ಲ ರೀತಿಯ ವಾಹನಗಳೂ ಸೇರಿದಂತೆ ಒಟ್ಟು ಉತ್ಪಾದನೆ 85 ಲಕ್ಷ ಇದ್ದದ್ದು 2011-12 ರ ಹೊತ್ತಿಗೆ 2 ಕೋಟಿ 4 ಲಕ್ಷಗಳಿಗೆ ಏರಿದೆ. ಮೋಟಾರು ವಾಹನ ಮತ್ತು ಬಿಡಿಭಾಗಗಳು ಈ ಎರಡು ಉದ್ಯಮಗಳಲ್ಲೂ ಕಾಯಂ ಕೆಲಸಗಾರರಿಗಿಂತ ಅಗ್ಗದ ವೇತನದ ಗುತ್ತಿಗೆ ಕೆಲಸಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು (ಹಣದುಬ್ಬರವನ್ನು ಕಳೆದಮೇಲೆ ಉಳಿಯುವ) ನೈಜವೇತನ 2000-01 ರಿಂದ 2009-10 ರ ವರೆಗೆ ನಿರಂತರವಾಗಿ ಇಳಿಯುತ್ತಲೇ ಬಂದಿದೆ. 2000-01 ರಲ್ಲಿ ಮೋಟಾರುವಾಹನ ಉದ್ಯಮದ ಶ್ರಮಿಕನು/ಳು ತನ್ನ ಮತ್ತು ಕುಟುಂಬದ ಜೀವಪೋಷಣೆಗಾಗಿ 2 ಗಂಟೆ 12 ನಿಮಿಷಗಳನ್ನು ವ್ಯಯಿಸಿದರೆ ಉಳಿದ 5 ಗಂಟೆ 48 ನಿಮಿಷಗಳನ್ನು ಬಂಡವಳಿಗರಿಗೆ (ಮತ್ತು ಬ್ಯಾಂಕ್, ಭೂಮಾಲೀಕ ಮೇನೇಜ್ಮೆಂಟ್  ಸಿಬ್ಬಂದಿಗಾಗಿ) ಮಿಗತೆ ಮೌಲ್ಯವನ್ನು ಉತ್ಪಾದಿಸಲು ವ್ಯಯಿಸಿದ್ದಾನೆ/ಳೆ. 2009-10 ರ ಹೊತ್ತಿಗೆ ಶ್ರಮಿಕನು/ಳು ತನ್ನ ಮತ್ತು ಕುಟುಂಬದ ಜೀವಪೋಷಣೆಗಾಗಿ ಕೇವಲ 1 ಗಂಟೆ 12 ನಿಮಿಷಗಳನ್ನು ಮತ್ತು ಬಂಡವಳಿಗರಿಗಾಗಿ 6 ಗಂಟೆ 48 ನಿಮಿಷಗಳನ್ನು ವ್ಯಯಿಸುವಂತಾಯಿತು.
19. ಭಾರತದ ಒಟ್ಟು ಮೋಟಾರು ವಾಹನ, ಬಿಡಿಭಾಗಗಳ ಉತ್ಪಾದನೆಯ ಶೇಕಡ 60 ರಷ್ಟು ಇರುವ ದೆಹಲಿಯ ಆಚೆಗಿನ, ಗುರಗಾಂವ್-ಮಣೆಸರ್-ಬಾವಲ್ ವಲಯದಲ್ಲಿ ಕೆಲಸಮಾಡುವ ಸುಮಾರು 10 ಲಕ್ಷ ಶ್ರಮಿಕರಲ್ಲಿ ಶೇಕಡ 80 ರಷ್ಟು ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಯೂನಿಯನ್ ಅನ್ನು ಧ್ವಂಸಗೊಳಿಸುವುದು, ಕೆಲಸದಿಂದ ವಜಾ ಮಾಡುವುದು, ಹೊಡೆತ-ಬಡಿತ, (2006 ರಲ್ಲಿ ಗುರಗಾಂವ್ ನಲ್ಲಿ, ಮಾತುಕತೆಗೆಂದು ಕರೆದ, ಸಂಪೂರ್ಣ ಶಾಂತಿಯಿಂದ ಇದ್ದ, ಹೊಂಡಾ ಕೆಲಸಗಾರರ ಮೇಲೆ ಪೋಲೀಸರು ಎಸಗಿದ ಕ್ರೌರ್ಯವನ್ನು ನೆನಪಿಸಿಕೊಳ್ಳಿ) ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸಿಕ್ಕಿಸುವುದು, ಕೊಲೆಮಾಡುವುದು ಮಾಮೂಲಿಯಾಗಿಬಿಟ್ಟಿದೆ. ಉದಾಹರಣೆಗೆ, ಜರ್ಮನಿಯ ಮೋಟಾರುವಾಹನ ಬಿಡಿಭಾಗಗಳ ತಯಾರಿಕಾ ಕಾರ್ಖಾನೆ ಬೋಷ್, ಮೂರುಸಲ ಯೂನಿಯನ್ ಕಟ್ಟುವ ಪ್ರಯತ್ನ ನಡೆದಾಗ ಮೂರು ಸಲವೂ ಆಗದಂತೆ ನೋಡಿಕೊಂಡಿತು. ಉಳಿದ ಕಾರ್ಖಾನೆಗಳಲ್ಲೂ ಇದೇ ಕತೆ.
20. ಸಹಜವಾಗೇ, ಬಹುಸಂಖ್ಯಾತ ಶ್ರಮಿಕರು ವಿಶ್ವಾಸವಿಟ್ಟ ನೈಜ ಟ್ರೇಡ್ ಯೂನಿಯನ್ ಗೆ ಮಾನ್ಯತೆ; ಕಾಯಂ ಉದ್ಯೋಗಗಳಿಗೆ ಕಾನೂನಿಗೆ ವಿರುದ್ಧವಾಗಿ ಗುತ್ತಿಗೆ ಮತ್ತು ಅಪ್ರೆಂಟಿಸ್ ಹೆಸರಿನಲ್ಲಿ ಊಹೆಗೂ ನಿಲುಕದಷ್ಟು ಕಡಿಮೆ ವೇತನ ಕೊಟ್ಟು ನೇಮಿಸಿಕೊಂಡಿರುವ ಶ್ರಮಿಕರನ್ನು ಕಾಯಂಗೊಳಿಸುವುದು, ಮೋಟಾರುವಾಹನ ಮತ್ತು ಮೋಟಾರು ಬಿಡಿಭಾಗಗಳ ಎರಡೂ ಉದ್ಯಮಗಳಲ್ಲಿನ ಶ್ರಮಿಕರ ಮುಖ್ಯ ಬೇಡಿಕೆಗಳಾಗಿವೆ. ಶ್ರಮಿಕರ ಘನತೆಯನ್ನು ಆಗ್ರಹಿಸಿ ಮತ್ತು ಹೋರಾಟಗಾರ ಶ್ರಮಿಕರಿಗೆ ಕಿರುಕುಳ ಕೊಡುವುದರ ವಿರುದ್ಧ, ಶ್ರಮಿಕರು ಆಗಾಗ ಕಾರ್ಖಾನೆ ಮತ್ತು ಷಾಪುಗಳ ಮಟ್ಟದಲ್ಲಿ ಕೆಲಸದ ಸ್ಥಗಿತ ಮತ್ತು ಇತರ ವಿಧಾನಗಳ ಮೂಲಕ ಪ್ರತಿಭಟನೆ ನಡೆಸುತ್ತಾರೆ. ಭಾರತದ ಈ ಎರಡು ಬಹುಮುಖ್ಯ ಔದ್ಯಮಿಕ ಕೇಂದ್ರಗಳಲ್ಲಿ ನಡೆದ ಒಂದೆರಡು ಪ್ರಾತಿನಿಧಿಕ ಚಳುವಳಿಗಳ ಸಂದರ್ಭದಲ್ಲಿ ವರ್ಗ ಹೋರಾಟದ ಹೊಸಹೊಸ ಸಂಗತಿಗಳು, ಬಹುರಾಷ್ಟ್ರೀಯ ಮೇನೇಜ್ ಮೆಂಟಿನ ಹೊಸ ಕುಟಿಲ ತಂತ್ರಗಳು ಹಾಗೂ ಪ್ರಭುತ್ವದ ಪಾತ್ರ ತುಂಬಾ ವಿಶಧವಾಗಿ ಪ್ರಕಟಗೊಂಡಿವೆ.

ಮಾರುತಿ ಮತ್ತು ಪ್ರಕೋಲ್ ಹೋರಾಟಗಳಿಂದ ಕಲಿತ ಪಾಠಗಳು
21. ಕುಖ್ಯಾತ ಖಾಪ್ ಪಂಚಾಯತ್ ಗಳೇ ಮೇಲುಗೈ ಪಡೆದಿರುವ, ಸಂಪ್ರದಾಯವಾದೀ ಹಿಂದಿ ಹೃದಯಭಾಗದಲ್ಲಿರುವ ಮಣೆಸರ್ ದ ಮಾರುತಿ-ಸುಜುಕಿ ಕಾರ್ಖಾನೆಯು ಸಾಕಷ್ಟುಕಾಲ ಔದ್ಯಮಿಕ ಸಂಘರ್ಷದ ಮಂಚೂಣಿ ನೆಲೆ ಎನಿಸಿತ್ತು. ಇದರ ಶ್ರಮಿಕರಲ್ಲಿ ಹೆಚ್ಚಿನವರು ಯುವಕರು, ಬಹುಮಟ್ಟಿಗೆ ವಿದ್ಯಾವಂತರು ಮತ್ತು ಸಾಕಷ್ಟು ಜನ ದೂರ ದೂರ ಸ್ಥಳಗಳಿಂದ ಬಂದವರು. ಹಿಂದಿನ ಕಾಲದಲ್ಲಿ ಶ್ರಮಿಕರಿಗೆ ವಸತಿ ಸೌಲಭ್ಯವನ್ನು ಒದಗಿಸುವುದು ವಾಡಿಕೆಯಾಗಿತ್ತು. ವಸತಿ ಸೌಲಭ್ಯವನ್ನು ಒದಗಿಸದಿರುವುದೇ ಈಗ ವಾಡಿಕೆಯಾಗಿರುವುದರಿಂದ ಕಂಪೆನಿಯು ವಸತಿ ಸೌಲಭ್ಯವನ್ನು ಒದಗಿಸಿಲ್ಲ. ಹೀಗಾಗಿ ಶ್ರಮಿಕರು ಸ್ಥಳೀಯ ಬಾಡಿಗೆಮನೆ ಮಾಲೀಕರು ಪರಿವರ್ತಿಸಿರುವ ಹಾಸ್ಟೆಲ್ ಗಳ ಸಣ್ಣ ಸಣ್ಣ ಕೊಠಡಿಗಳಲ್ಲಿ ವಾಸಿಸುತ್ತಾರೆ. ಯೂನಿಯನ್ ಕಟ್ಟಿಕೊಳ್ಳುವ ಹಕ್ಕಿಗಾಗಿ ಸುದೀರ್ಘ ಶಾಂತಿಯುತ ಹೋರಾಟ ಮಾಡಿದಮೇಲೆ ಎಲ್ಲಾ ವಿಭಾಗಗಳ ಶ್ರಮಿಕರನ್ನೂ ಒಳಗೊಂಡ ಮಾರುತಿ ಸುಜುಕಿ ನೌಕರರ ಸಂಘ (ಎಂ. ಎಸ್. ಇ. ಯು) 2012 ರ ಮಾರ್ಚ್ ನಲ್ಲಿ ನೋಂದಾಯಿಸಲ್ಪಟ್ಟಿತು. ಹೀಗಿದ್ದರೂ ಎಂಎಸ್ಇಯು, ಯಾವುದೇ ಕೇಂದ್ರೀಯ ಕಾರ್ಮಿಕ ಸಂಘದ ಮಾನ್ಯತೆ ಪಡೆಯಲಾಗದೆಂದು ಮೇನೇಜ್ ಮೆಂಟ್ ಕಾನೂನಿಗೆ ವಿರುದ್ಧವಾಗಿ ಈ ದಿನದ ವರೆಗೂ ಹೇಳುತ್ತಾ ಬಂದಿದೆ. 2012 ರ ಜೂನ್ ತಿಂಗಳಲ್ಲಿ 13 ದಿನಗಳ ಕಾಲ ಮುಷ್ಕರ ನಡೆಯಿತು. ಕೆಲಸದಿಂದ ಕಿತ್ತು ಹಾಕಿದ್ದ 11 ಜನ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಮೇನೇಜ್ ಮೆಂಟ್ ಒಪ್ಪಿದಮೇಲೆ ಮುಷ್ಕರ ಕೊನೆಗೊಂಡಿತು.
22. ಮಹತ್ವದ ಸಂಗತಿಯೆಂದರೆ 2012, ಜುಲೈ 18 ರ ಮುಷ್ಕರದ ಕಿಡಿ ಹತ್ತಿಕೊಂಡಿದ್ದು ಒಬ್ಬ ಸೂಪರ್ ವೈಸರ್ ದಲಿತ ಕಾರ್ಮಿಕರೊಬ್ಬರನ್ನು ಜಾತಿನಿಂದನೆಮಾಡಿ ಅದಕ್ಕೆ ಆ ದಲಿತ ಕಾರ್ಮಿಕ ತಕ್ಕ ಉತ್ತರ ಕೊಟ್ಟ ಘಟನೆಯಿಂದ. ಅಂಥ ನಿಂದನೆ ಅಕಸ್ಮಾತ್ ಬಾಯ್ತಪ್ಪಿನಿಂದ ಆದದ್ದಲ್ಲ ಎಂಬುದನ್ನು ಗಮನಿಸಬೇಕು. ಕಾರ್ಮಿಕರ ನೈತಿಕ ಬಲವನ್ನು ಮುರಿಯಲು ದಿನನಿತ್ಯ ಹಾಗೆ ಮಾಡಬೇಕೆಂದು ಮೇನೇಜರ್ ಮತ್ತು ಸೂಪರ್ ವೈಸರ್ ಗಳಿಗೆ ತರಬೇತಿ ಸಿಕ್ಕಿರುತ್ತದೆ. ಈ ಘಟನೆಯಿಂದಾಗಿ ಒಂದುಕಡೆ ಕಾರ್ಮಿಕರು ಮತ್ತೊಂದುಕಡೆ ಮೇನೇಜ್ ಮೆಂಟ್ ಮತ್ತು ಗೂಂಡಾಗಳು ಇವರಿಬ್ಬರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಎರಡೂ ಕಡೆಗಳಲ್ಲಿನ ಜನರಿಗೆ ಗಾಯಗಳಾದವು. ಮಾನವಸಂಪನ್ಮೂಲ ಮೇನೇಜರ್ ಒಬ್ಬರು ಸತ್ತರು. ಮೇನೇಜ್ ಮೆಂಟ್ ಮತ್ತು ಪ್ರಭುತ್ವದ ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾದರು. ವಿವೇಚನೆಯಿಲ್ಲದೆ ಸಿಕ್ಕಸಿಕ್ಕವರನ್ನೆಲ್ಲಾ ಬಂಧಿಸಿದರು. ಪೊಲೀಸ್-ಗೂಂಡಾ ಪಡೆಗಳ ಕ್ರೌರ್ಯ ಇಡೀ ಪ್ರದೇಶವನ್ನು ಆವರಿಸಿತು.
23. ಖಾಪ್ ಪಂಚಾಯತಿಗಳಲ್ಲಿ ಭೂಮಾಲೀಕ-ಮನೆಮಾಲೀಕ ಶಕ್ತಿಗಳು ಒಗ್ಗೂಡಿ ಮುಷ್ಕರನಿರತ ಯೂನಿಯನ್ ಅನ್ನು ತುಳಿಯಬೇಕೆಂದು ತೀರ್ಮಾನಿಸಿದರು. ಬಾಡಿಗೆದಾರ ಕಾರ್ಮಿಕರನ್ನು ಬಲವಂತವಾಗಿ ಖಾಲಿಮಾಡಿಸಿದರು. ಇದರಿಂದ ಕಾರ್ಮಿಕರ ತೊಂದರೆಗಳು ಇಮ್ಮಡಿಗೊಂಡವು. ಈ ಮಧ್ಯೆ ಇಡೀ ಫ್ಯಾಕ್ಟರಿಯನ್ನು ಕಬ್ಬಿಣ ಕವಚದ ಕೋಟೆಯನ್ನಾಗಿ ಮಾಡಿಬಿಟ್ಟರು. ಫ್ಯಾಕ್ಟರಿಯೊಳಕ್ಕೆ ಕಾಲಿಡಬಯಸುವ ಪ್ರತಿಯೊಬ್ಬ ಕಾರ್ಮಿಕನೂ ‘ಸನ್ನಡತೆಯ’ ವಾಗ್ದಾನವನ್ನು ಬರೆದುಕೊಟ್ಟು ಒಳಬರಬಹುದೆಂಬ ಷರತ್ತನ್ನು ಒಡ್ಡುವ ಮೂಲಕ ಅಘೋಷಿತ ಲಾಕೌಟನ್ನು ಘೋಷಿಸಿದರು.
24. ಈ ಹಿನ್ನೆಲೆಯಲ್ಲಿ ‘ಭಾರತೀಯ ಮೋಟಾರುವಾಹನ ತಯಾರಕರ ಸಮಾಜ’ (ಎಸ್ ಐ ಎ ಎಮ್) ಮತ್ತು ಮೋಟಾರುವಾಹನ ಬಿಡಿಭಾಗಗಳ ತಯಾರಕರ ಸಂಘ (ಎಸಿಎಮ್ಎ) ಕಟ್ಟುನಿಟ್ಟಾಗಿಲ್ಲದ ‘ಸಡಿಲ’ ಕಾರ್ಮಿಕ ಕಾನೂನುಗಳಿಗಾಗಿ, ಮತ್ತು ಮುಷ್ಕರದ ಅವಧಿಯಲ್ಲಿ ಕಾಯಂ ನೌಕರರನ್ನು ವಜಾಮಾಡುವ ಹಕ್ಕಿಗಾಗಿ ಆಗ್ರಹಿಸತೊಡಗಿದವು. ಈ ನಿಲುವನ್ನು ಕಾರ್ಮಿಕ ಸಂಬಂಧಗಳ ‘ಪರಿಣಿತರು’ ಕಾರ್ಮಿಕರ ಹಿತದೃಷ್ಟಿಯಿಂದಲೇ ಅನುಮೋದಿಸಿದರು. ಮುಷ್ಕರಗಳ ಸಮಯದಲ್ಲೂ ಸಹ ಕಾಯಂ ನೌಕರರನ್ನು ಕೆಲಸದಿಂದ ವಜಾ ಮಾಡಲು ಭಾರತದ ‘ಓಬೀರಾಯನ ಕಾಲದ’ ಕಾರ್ಮಿಕರ ಕಾನೂನಿನಲ್ಲಿ ಅವಕಾಶವಿಲ್ಲದ್ದರಿಂದ ಮಾಲೀಕರು ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಈ ‘ಪರಿಣಿತರು’ ವಾದಿಸಿದರು. ಮೋಟಾರುವಾಹನ ಸಂಸ್ಥೆಗಳು ಉತ್ಪಾದನೆ ‘ಯೂನಿಯನ್ ಮುಕ್ತ’ ವಾಗಿರಬೇಕೆಂದು ಬಹಿರಂಗವಾಗಿಯೇ ಘೋಷಿಸಿ ಅದಕ್ಕಾಗಿಯೇ ತಮ್ಮ ಉತ್ಪಾದನಾ ವ್ಯವಹಾರವನ್ನೆಲ್ಲಾ ಗುಜರಾತಿಗೆ ಸ್ಥಳಾಂತರಿಸುವುದಾಗಿ ಬೆದರಿಸದರು. (ಅಂದರೆ ಮಾಲೀಕರಿಗೆ ತೊಂದರೆ ಕೊಡುವ ಕಾರ್ಮಿಕರನ್ನೆಲ್ಲಾ ನರೇಂದ್ರ ಮೋದಿ ನೋಡಿಕೊಳ್ಳುತ್ತಾರೆಂಬ ಆಶಾಭಾವನೆ ಅವರದು).
25. ಕಾರ್ಮಿಕರು ಸುದೀರ್ಘವಾದ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಧರಣಿಯನ್ನು ಸೇರಿಕೊಂಡರು. ಕೊಯಮತ್ತೂರಿನ ಪ್ರಿಕೋಲ್ ನ ಕಾರ್ಮಿಕರು ಮತ್ತು ಗುರ್ಗಾಂವ್ನ ಹೊಂಡಾ ಕಾರ್ಮಿಕರೂ ಸಹ ಐಕ್ಯತಾ ಪ್ರತಿಭಟನೆಗಳನ್ನು ನಡೆಸಿದರು. ಕೊನೆಗೆ ಉತ್ಪಾದನೆ ಶುರುವಾಯಿತು. ಆದರೆ ಪೋಲೀಸರ, ನಿವೃತ್ತ ಸೈನಿಕರ, ಇಪ್ಪತ್ನಾಲ್ಕು ಗಂಟೆಯೂ ಫ್ಯಾಕ್ಟರಿಯಲ್ಲಿ ಗಸ್ತು ತಿರುಗುವ ವಿಶೇಷಕಾರ್ಯಪಡೆಯ, ಮತ್ತು ಪ್ರತಿಯೊಬ್ಬ ಕಾರ್ಮಿಕನ ಪ್ರತಿಯೊಂದು ಚಲನವಲನವನ್ನೂ ಗಮನಿಸುವ ಭದ್ರತಾ ಕ್ಯಾಮರಾಗಳ ಕಣ್ಗಾವಲಿನಲ್ಲಿ.
26. ಕೊಯಮತ್ತೂರಿನ ಪ್ರಿಕೋಲ್ ಮೋಟಾರುವಾಹನ ಬಿಡಿಭಾಗಗಳ ಕಾರ್ಖಾನೆಯಲ್ಲೂ ಇಂಥದೇ ಘಟನೆ ಬೇರೊಂದು ರೀತಿಯಲ್ಲಿ ನಡೆಯಿತು. 2007 ರ ಮಾರ್ಚ್ ತಿಂಗಳಲ್ಲಿ ಬಹುಸಂಖ್ಯಾತ ಕಾರ್ಮಿಕರ ವಿಶ್ವಾಸ ಪಡೆದು ಹೊಸದಾಗಿ ಪ್ರಾರಂಭವಾದ ಯೂನಿಯನ್ ಗೆ ಮಾನ್ಯತೆ ಕೊಡಬೇಕೆಂಬ ಏಕೈಕ ಬೇಡಿಕೆಯೊಂದಿಗೆ ದೃಢನಿರ್ಧಾರದ ಹೋರಾಟ ಶುರುವಾಯಿತು. ಕಾಯಂ ಕಾರ್ಮಿಕರು, ಆನ್ಸಿಲರಿ ಘಟಕದ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಒಟ್ಟಾಗಿ ಹೋರಾಡಿದರು. ಎಐಸಿಸಿಟಿಯುಗೆ ನಿಷ್ಠವಾಗಿದ್ದ ಆ ಯೂನಿಯನ್ ಅನ್ನು ‘ಮಾವೋವಾದಿ’ ಎಂದು ಬ್ರಾಂಡ್ ಮಾಡಿದರು. ಆಡಳಿತವರ್ಗ ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ, ಕಾರ್ಮಿಕರ ವೇತನ ಹೆಚ್ಚಳ ಮಾಡಲು ನಿರಾಕರಿಸುವುದು, ವೇತನದಿಂದ ಹಣ ಮುರಿದುಕೊಳ್ಳುವುದು, ಇನ್ಕ್ರಿಮೆಂಟ್ ತಡೆಹಿಡಿಯುವುದು, ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕುವುದು ಇವೇ ಮುಂತಾದ ಕಿರುಕುಳದ ಕ್ರಮಗಳನ್ನು ಕಾರ್ಮಿಕರ ಮೇಲೆ ಪ್ರಯೋಗಿಸಿತು. ಇದಾವುದಕ್ಕೂ ಜಗ್ಗದ ಶ್ರಮಿಕರು ಮಾರ್ಚ್ 2007 ರ ಮುಷ್ಕರವನ್ನು ಮುಂದುವರೆಸಿದರು.
27. ಕೆಲ ಕಾರ್ಮಿಕರನ್ನು ಕಾರ್ಮಿಕರಿಂದಲೇ ಪ್ರತ್ಯೇಕಿಸಿ ತುಳಿಯಲು 2009 ರ ಸೆಪ್ಟಂಬರ್ ತಿಂಗಳಲ್ಲಿ ಜರುಗಿದ ಮಾನವಸಂಪನ್ಮೂಲ ಉಪಾಧ್ಯಕ್ಷರ ಹಿಂಸಾತ್ಮಕ ಸಾವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಯೂನಿಯನ್ ಮುಖಂಡರ ಮೇಲೆ, ಮಹಿಳೆಯರನ್ನೂ ಬಿಡದಂತೆ ಎಲ್ಲಾ ಕಾರ್ಮಿಕ ಧುರೀಣರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕಿದರು. ಅವರಲ್ಲಿ ಕೆಲವರು ನೂರಕ್ಕೂ ಹೆಚ್ಚುದಿನ ಜೈಲಿನಲ್ಲಿರಬೇಕಾಯಿತು. ಆದರೆ ಅವರಲ್ಲಿ ಯಾರೊಬ್ಬರೂ ರಕ್ಷಣಾತ್ಮಕ ನಿಲುವನ್ನು ತಾಳಲಿಲ್ಲ. ಹೋರಾಟದ ಬಗ್ಗೆ ವಿಷಾದಿಸಲಿಲ್ಲ.  ಕೋರ್ಟಿನ ಒಳಗೆ-ಹೊರಗೆ ಕದನ ಮುಂದುವರೆಯಿತು.
28. ನಮ್ಮ ಪಕ್ಷ ಮತ್ತು ಯೂನಿಯನ್ ಕಾರ್ಮಿಕರ ಮಧ್ಯೆ ವ್ಯಾಪಕವಾಗಿ ಮತ್ತು ತೀವ್ರವಾಗಿ ಕೆಲಸಮಾಡಿ ಹೋರಾಟಕ್ಕೆ ಒಟ್ಟಾಗಿ ಬೆಂಬಲಕೊಡುವಂತೆ ಕಾರ್ಮಿಕ ಕುಟುಂಬದವರನ್ನು ಮತ್ತು ಸ್ಥಳೀಯರನ್ನು ಪ್ರೋತ್ಸಾಹಿಸಿದವು. ಚರ್ಚೆ, ಅಭಿಪ್ರಾಯ ವಿನಿಮಯ ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಅವರೆಲ್ಲರ ರಾಜಕೀಯ ಪ್ರಜ್ಞೆಯನ್ನು ಹೆಚ್ಚುಮಾಡುವಂಥ ಸೃಜನಾತ್ಮಕ ಪ್ರಯತ್ನಗಳು ನಿರಂತರವಾಗಿ ನಡೆದವು. ಆ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ವ್ಯಾಪ್ತಿ ವಿಸ್ತರಿಸಿ ಪ್ರಿಕೋಲ್ ಕಾರ್ಮಿಕರು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇವೆಲ್ಲದರ ಒಟ್ಟು ಪರಿಣಾಮದಿಂದಾಗಿ, ಆಡಳಿತವರ್ಗ ಮತ್ತು ಸರ್ಕಾರಗಳ ದುಷ್ಟಕೂಟ ಇಂಥ ಸಂದರ್ಭಗಳಲ್ಲಿ ಮಾಮೂಲಿಯಾಗಿ ಮಾಡುವ ಯತ್ನಗಳು, ಅಂದರೆ, ಕಾರ್ಮಿಕರನ್ನು ಸತಾಯಿಸಿ, ದಣಿಸಿ ಸೋತು ಸುಣ್ಣವಾಗುವಂತೆ ಮಾಡಿ ಹೋರಾಟ ಬಿಟ್ಟು ಶರಣಾಗುವಂತೆ ಮಾಡುವ ತಂತ್ರಗಳು ಫಲಿಸಲಿಲ್ಲ. ಕಾರ್ಮಿಕರು ಅಚಲರಾಗಿ ನಿಂತು ಹೋರಾಡಿದರು. ಉಸಿರುಕಟ್ಟಿಸುವ ಚೌಕಟ್ಟಿಗೆ ಸಿಕ್ಕಿಸಿ ಅವಮಾನಿತವಾಗಿದ್ದ ಯೂನಿಯನ್ ಗೆ ಮಾನ್ಯತೆಯನ್ನು ಪಡೆದು, ಹಾಗೆ ಮಾಡುವ ತಮ್ಮ ಮೂಲಭೂತ ಹಕ್ಕನ್ನು ಗೆದ್ದುಕೊಂಡರು.
29. ಕಾರ್ಮಿಕ ಕಾನೂನುಗಳನ್ನು ಮಾನ್ಯ ಮಾಡಲು ಮೊಂಡುತನದಿಂದ ನಿರಾಕರಿಸುವ, ಅವನ್ನು ಬಹಿರಂಗವಾಗೇ ಮುರಿಯಲು ಅವಕಾಶಕೊಡುವುದನ್ನೇ ನಿಯಮವನ್ನಾಗಿಸಿರುವ ವ್ಯವಸ್ಥೆ ಇರುವ ಸನ್ನಿವೇಶದಲ್ಲಿ; ಯೂನಿಯನ್ ಗಳು ಕಾರ್ಯ ನಿರ್ವಹಿಸದಂತೆ ತಡೆಯುವ, ಕಾರ್ಮಿಕರ ಕುಂದುಕೊರತೆಗಳನ್ನು ಬಗೆಹರಿಸಿ ನ್ಯಾಯವೊದಗಿಸುವ ಎಲ್ಲ ದಾರಿಗಳು ಮುಚ್ಚಿದ್ದಾಗ ಮತ್ತು ಯೂನಿಯನ್ ಗಳ ಕಾರ್ಯನಿರ್ವಹಣೆಯನ್ನೆ ಹತ್ತಿಕ್ಕಿದಾಗ,  ಪ್ರಜಾತಂತ್ರಕ್ಕೆ ವಿರುದ್ಧವಾದ, ಶ್ರಮಿಕರ ಘನತೆಗೆ ಕುಂದು ತರುವ, ಶೋಷಣಾಪೂರಿತ ಸ್ಥಿತಿಗತಿಗಳ ವಿರುದ್ಧ ಹೋರಾಡುವ ಕಾರ್ಮಿಕರನ್ನು ಬಗ್ಗು ಬಡಿಯಲು ಬಾಡಿಗೆ ಗೂಂಡಾಗಳು, ಭ್ರಷ್ಟ ವಿಧಾನಗಳು ಮತ್ತು ಕಿರುಕುಳಗಳನ್ನು ಬಳಸುವ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಆವೇಶ, ಉದ್ವಿಗ್ನ ಸ್ಥಿತಿ ಮತ್ತು ಹಿಂಸಾತ್ಮಕ ಘರ್ಷಣೆಗಳು ಸಂಭವಿಸುತ್ತವೆ. ಈ ಹಿಂದೆ, ಗ್ರಾಜಿಯಾನೋ (ನೊಯಿಡಾ) ಮತ್ತು ರೀಜೆನ್ಸಿ ಸಿರಾಮಿಕ್ಸ್ (ಪುದುಚೇರಿ) ಗಳಲ್ಲಿ ನಡೆದ ಔದ್ಯಮಿಕ ಘರ್ಷಣೆಗಳಲ್ಲಿ ಮೆನೇಜರ್ ಗಳು ಪ್ರಾಣ ಕಳೆದುಕೊಂಡಿದ್ದು; ರೀಕೊ (ಗುರ್ ಗಾಂವ್) ಫ್ಯಾಕ್ಟರಿಯಲ್ಲಿ ಕಂಪೆನಿಯ ಅಧಿಕಾರಿಗಳು ಮತ್ತು ಬಾಡಿಗೆ ಗೂಂಡಾಗಳು ಸೇರಿ ಕಾರ್ಮಿಕರೊಬ್ಬರನ್ನು ಕುಲುಮೆಯೊಳಕ್ಕೆಸೆದು ಸಜೀವವಾಗಿ ಸುಟ್ಟಿದ್ದು ( ಈ ಕೇಸಿನಲ್ಲಿ ಕೊಲೆಗಡುಕರಿಗೆ ಇನ್ನೂ ಶಿಕ್ಷೆಯಾಗಿಲ್ಲ) ಇವೆಲ್ಲಾ ಇಂಥ ಅನಿವಾರ್ಯತೆಯ ದಾರುಣ ಉದಾಹರಣೆಗಳು. ಆದರೆ ಅದೇ ಹೊತ್ತಿಗೆ, ಕಾರ್ಪೊರೇಟ್ ವಲಯ ಮತ್ತು ಸರ್ಕಾರಗಳು ಕಾರ್ಮಿಕರ ಕಾನೂನುಗಳನ್ನು ‘ಸುಧಾರಿಸಲು’  ಇಂಥ ಸಂದರ್ಭಗಳನ್ನು ಬಳಸಿಕೊಳ್ಳುತ್ತಿವೆ. ಅಂದರೆ ಹಾಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ಕಾನೂನುಬದ್ಧಗೊಳಿಸಲು ಮತ್ತು ಶ್ರಮಿಕರ ಶೋಷಣೆಯ ಸ್ವಾತಂತ್ರ್ಯವನ್ನು ಕಾಯಿದೆಗಳ ತೊಡಕಿಲ್ಲದಂತೆ ಪಡೆಯಲು ಇಂಥ ಸಂದರ್ಭಗಳು ನೆಪವಾಗಿವೆ.
30. ಇಂಥ ಸನ್ನಿವೇಶದಲ್ಲಿ ಶ್ರಮಿಕವರ್ಗ ಔದ್ಯಮಿಕ ಪ್ರಜಾತಂತ್ರಕ್ಕಾಗಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಮತ್ತು ಶ್ರಮಿಕರ ಘನತೆ ಮತ್ತು ಹಕ್ಕುಗಳಿಗಾಗಿ ತನ್ನ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ಫ್ಯಾಕ್ಟರಿಗಳ ಆಚೆಗೂ ಇರುವ ಜನರಲ್ಲಿನ ಪ್ರಜಾತಾಂತ್ರಿಕ ವರ್ಗವನ್ನೂ ಒಗ್ಗೂಡಿಸಿ ಹೋರಾಡುವಂತೆ, ತಾನು ಒಂದು ರಾಜಕೀಯ ಶಕ್ತಿಯಾಗಿ ಮುಖ್ಯವಾಗುವಂಥ ರಾಜಕೀಯ ಹೋರಾಟವನ್ನು ರೂಪಿಸಬೇಕಾದ ಸವಾಲು ಕಾರ್ಮಿಕ ವರ್ಗದ ಮುಂದಿದೆ.

ಗುತ್ತಿಗೆ ಕಾರ್ಮಿಕರು
31. ನವ ಉದಾರವಾದೀ ಸುಧಾರಣೆಗಳ ಈ ಎರಡು ದಶಕಗಳಲ್ಲಿ ಎದ್ದು ಕಾಣುವ ಅಂಶಗಳೆಂದರೆ ಉತ್ಪಾದನಾ ಪ್ರಕ್ರಿಯೆಯಲ್ಲಿನ ಬದಲಾವಣೆಗಳು. (ಉದಾಹರಣೆಗೆ, ಶ್ರಮಿಕ ಕೇಂದ್ರಿತ ಉತ್ಪಾದನೆಯಿಂದ ಬಂಡವಾಳ ಕೇಂದ್ರಿತ ಮತ್ತು ಸ್ವಯಂಚಾಲಿತ ಯಂತ್ರ ಕೇಂದ್ರಿತ ಉತ್ಪಾದನೆಗೆ ಬದಲಾದದ್ದು) ಮತ್ತು ಶ್ರಮಿಕವರ್ಗದ ಸಂರಚನೆಯಲ್ಲಾದ ಮಾರ್ಪಾಡು. (ಉದಾಹರಣೆಗೆ, ದೊಡ್ಡ ಪ್ರಮಾಣದಲ್ಲಿ ಶ್ರಮಿಕರು ದಿನಗೂಲಿ ನೌಕರರಾಗಿದ್ದು). ವಿವಿಧ ಔದ್ಯಮಿಕ ವಲಯಗಳಲ್ಲಿ ಮತ್ತು ಶ್ರಮಿಕ ಶ್ರೇಣಿಗಳ ಸಾಪೇಕ್ಷ ಪ್ರಾಮುಖ್ಯತೆಯಲ್ಲಿ, ಹಾಗೆಯೇ ಪ್ರತಿ ವಲಯದಲ್ಲಿನ ಸಮಸ್ಯೆಗಳ ಸ್ವರೂಪದಲ್ಲೂ ಬದಲಾವಣೆಗಳಾಗಿವೆ. ಈ ಸನ್ನಿವೇಶದಲ್ಲಿ ಶ್ರಮಿಕವರ್ಗದ ಆಂದೋಲನವೂ ತನ್ನ ಸಂರಚನೆಯಲ್ಲಿ ಮಾರ್ಪಾಡು ಮಾಡಿಕೊಂಡು ಖಾಯಂ ಕಾರ್ಮಿಕರು ಮತ್ತು ಇತರ ರೀತಿಯ, ಅಂದರೆ, ಗುತ್ತಿಗೆ, ದಿನಗೂಲಿ, ಅಪ್ರೆಂಟಿಸ್ ಮುಂತಾದ ರೀತಿಯ ಕಾರ್ಮಿಕರ ಮಧ್ಯೆ ಬಂಡವಾಳ ಕೃತಕವಾಗಿ ನಿರ್ಮಿಸಿರುವ ಅಡ್ಡಗೋಡೆಗಳನ್ನು ಒಡೆದುಹಾಕುವ ಮಾರ್ಗ ಮತ್ತು ವಿಧಾನಗಳನ್ನು ಒಳಗೊಳ್ಳುವಂತೆ ವಿಕಾಸ ಹೊಂದಬೇಕಾಗಿದೆ.
32. ಈ ಮೊದಲು ಗುರುತಿಸಿದಂತೆ ಭಾರತದ ನವ ಉದಾರವಾದೀ ಸುಧಾರಣೆಯನಂತರದ ಔದ್ಯಮಿಕ ಬೆಳವಣಿಗೆಗೆ ಶ್ರಮಶಕ್ತಿಯನ್ನೊದಗಿಸಿರುವುದು ಅರೆಬರೆ ವೇತನ ಕೊಟ್ಟು ದುಡಿಸಿಕೊಳ್ಳುತ್ತಿರುವ ಗುತ್ತಿಗೆ ಕಾರ್ಮಿಕರು, ವಲಸೆ ಕಾರ್ಮಿಕರು, ಮತ್ತು ಮಹಿಳಾಕಾರ್ಮಿಕರು. 1999-2000 ದಲ್ಲಿ ಫ್ಯಾಕ್ಟರಿ ವಲಯದ ಒಟ್ಟು ಶ್ರಮಶಕ್ತಿಯಲ್ಲಿ ಶೇಕಡ 20 ರಷ್ಟಿದ್ದ ಗುತ್ತಿಗೆ ಕಾರ್ಮಿಕರ ಪಾಲು 2008-2009 ರಲ್ಲಿ ಶೇಕಡ 32 ಕ್ಕೆ ಏರಿತು. ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಸಂಘಟಿತ ಶ್ರಮಿಕರ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಮೂಲ ಉದ್ಯೋಗ ಮತ್ತು ನಿರಂತರ ಉದ್ಯೋಗಗಳಲ್ಲವೆಂದು ಬೇಕುಬೇಕಾದಂತೆ ವರ್ಗೀಕರಿಸಿ ಗುತ್ತಿಗೆದಾರರಿಗೆ ವರ್ಗಾಯಿಸಲಾಯಿತು. ‘ಗುತ್ತಿಗೆ ಶ್ರಮದ ರದ್ದತಿ ಮತ್ತು ನಿಯಂತ್ರಣ ಕಾಯಿದೆ’ ವಾಸ್ತವವಾಗಿ ಗುತ್ತಿಗೆ ಶ್ರಮಪದ್ಧತಿಯನ್ನೇ ಬಲಗೊಳಿಸಿದೆ. ಆದರೂ, ಹೆಚ್ಚಿನ ಸಂಖ್ಯೆಯಲ್ಲಿ, ಅಪಾಯಕರ ಉದ್ಯೋಗಗಳಲ್ಲಿ ಪುಡಿಗಾಸಿನ ವೇತನ ಪಡೆದು ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರು ಮೂಕಪಶುಗಳಂತೆ ಕಷ್ಟವನ್ನು ಸಹಿಸಿಕೊಂಡಿಲ್ಲ. ಖಾಯಂ ಕಾರ್ಮಿಕರ ಜೊತೆಗೂಡಿ ಜಂಟಿಯಾಗಿ ಹೋರಾಡುತ್ತಿರುವುದಲ್ಲದೆ, ಸ್ವತಂತ್ರವಾಗಿಯೂ ತಮ್ಮದೇ ಆದ ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇತ್ತೀಚಿನ ಅದ್ಭುತ ಉದಾಹರಣೆಯೆಂದರೆ, 2012 ರಲ್ಲಿ ಪ್ರಾರಂಭವಾಗಿ 44 ದಿನ ನಡೆದ ಸಾರ್ವಜನಿಕ ವಲಯದ ನೈವೇಲಿ ಲಿಗ್ನೈಟ್ ಕಾರ್ಪೊರೇಶನ್ (ಎನ್ಎಲ್ ಸಿ) ಮುಷ್ಕರ. ಕೆಲವೇ ಸಹಸ್ರ ಗುತ್ತಿಗೆ ಕಾರ್ಮಿಕರು ತಮ್ಮ ಉದ್ಯೋಗಗಳ ಖಾಯಮಾತಿಗಾಗಿ ಮತ್ತು ಖಾಯಂ ನೌಕರರ- ಗುತ್ತಿಗೆ ಕಾರ್ಮಿಕರ ನಡುವಿನ ವೇತನ ತಾರತಮ್ಯವನ್ನು ತೊಡೆಯಲು ಅನೇಕ ವರ್ಷಗಳಕಾಲ ನಡೆಸಿದ ಹೋರಾಟಗಳ ಉತ್ತುಂಗ ಫಲವಾಗಿ ಈ ಮುಷ್ಕರ ನಡೆಯಿತು. ಇವರಿಗೆ ಬೆಂಬಲವಾಗಿ ಖಾಯಂ ನೌಕರರನ್ನು ಸಂಘಟಿಸಲು ಟ್ರೇಡ್ ಯೂನಿಯನ್ ಗಳು ಮುಂದಾಗಲಿಲ್ಲವಾದ್ದರಿಂದ ಗುತ್ತಿಗೆ ಕಾರ್ಮಿಕರ ಆ ಹೋರಾಟಕ್ಕೆ ಮತ್ತೊಮ್ಮೆ ಸೋಲುಂಟಾದರೂ ಎಂಥಾ ಅಗಾಧ ಸುಪ್ತಶಕ್ತಿ ಮತ್ತು ತಾಳಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಇದೆಯೆಂಬುದನ್ನು ತೋರಿಸಿಕೊಟ್ಟಿದ್ದಾರೆ.
33. ಸಾರ್ವಜನಿಕ ಸೇವೆಯ ಮುಖ್ಯ ವಲಯಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಈಗಲೂ ಉದ್ಯೋಗಾವಕಾಶದ ಮುಖ್ಯ ಆಗರಗಳೆನ್ನಿಸಿವೆ. ಆದರೆ ಸ್ವರೂಪದಲ್ಲಿ ಅವು ದಿನೇ ದಿನೇ ಅತಂತ್ರವಾಗುತ್ತಿವೆ. ಸ್ಕೂಲು ಕಾಲೇಜುಗಳಲ್ಲಿ ಖಾಯಂ ಶಿಕ್ಷಕರ ಹುದ್ದೆಗಳು ರದ್ದಾಗಿ ಅಥವಾ ಭರ್ತಿಯಾಗದೆ ಖಾಲಿ ಉಳಿದು ಗುತ್ತಿಗೆ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಏರಿದೆ. ಸಾಕಷ್ಟು ಪ್ರಚಾರ ಗಳಿಸಿರುವ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯನ್ನು ಈಗ ನಗರ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಆದರೆ ಇದರ ನಿಜವಾದ ಚಾಲಕ ಶಕ್ತಿ ಯಾರ ಕಣ್ಣಿಗೂ ಬೀಳದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರ ಶ್ರಮದಾನದಲ್ಲಡಗಿದೆ. ಆದರೆ ಈ ಕಾರ್ಯಕರ್ತೆಯರಿಗೆ ಖಾಯಂ ನೌಕರಿಯಲ್ಲಿರುವ ಯಾವ ಭದ್ರತೆಯೂ ಇಲ್ಲ. ಗೌರವಧನ ಎಂದು ಕೊಡುವ ಅಲ್ಪ ಹಣ ಯಾತಕ್ಕೂ ಸಾಲದು.
34. ಗುತ್ತಿಗೆ ಶಿಕ್ಷಕರು ಮತ್ತು ‘ಆಶಾ’ ದಂಥ ಯೋಜನೆಯಲ್ಲಿರುವವರಿಗೆ ಸಿಗುವುದು ಗೌರವಧನ ಮಾತ್ರ. ಆಶಾ ಕಾರ್ಯಕರ್ತೆಯರು ಸಂಘಟಿತರಾಗಿ, ಕೆಲಸಮಾಡುವ ಸ್ಥಳದಲ್ಲಿ ಸ್ಥಿತಿ-ಸೌಲಭ್ಯಗಳ ಸುಧಾರಣೆಗಾಗಿ, ಉತ್ತಮ ವೇತನಕ್ಕಾಗಿ ಹೋರಾಟ ಮಾಡುವ ದೃಢ ಸಂಕಲ್ಪ ತೋರಿಸಿದ್ದಾರೆ. ಗುತ್ತಿಗೆ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರ ಈ ವೀರ ಹೋರಾಟಗಳು ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿರುವ ಶ್ರಮಿಕವರ್ಗದ ಆಂದೋಲನದ ಹೊಸ ಸ್ಫೂರ್ತಿಯಾಗಿ ಹೊರಹೊಮ್ಮುತ್ತಿವೆ.

ವಲಸೆ ಕಾರ್ಮಿಕರು
35. ವಲಸೆ ಕಾರ್ಮಿಕರು ಅಸುರಕ್ಷಿತ ಮತ್ತು ಅಪಾಯಕಾರಿಯಾದ ಸ್ಥಿತಿ ಗತಿಗಳಲ್ಲಿ ಕಡಿಮೆ ವೇತನಕ್ಕಾಗಿ ಗಂಟೆಗಟ್ಟಳೆ ದುಡಿಯುತ್ತಾರೆ.’ ಅಂತರ್ ರಾಜ್ಯ ವಲಸೆ ಕಾರ್ಮಿಕರ ಕಾಯಿದೆ’ಯು ಪಾಲನೆಗಿಂತ ಉಲ್ಲಂಘನೆಗೇ ಹೆಸರಾಗಿರುವ  ಕಾಯಿದೆ. ಮನೆ, ಬಂಧು-ಬಾಂಧವರಿಂದ ದೂರ ಬಂದು ಕೆಲಸಮಾಡುವ ವಲಸೆ ಕಾರ್ಮಿಕರು, ಈಗ ನಾವು ಮತ್ತೆ ಮತ್ತೆ ಕಾಣುತ್ತಿರುವ, ಶಿವಸೇನೆ ಮತ್ತು ಅದರ ಕೂಸಾದ ಎಂಎನ್ಎಸ್ ಗಳ ಬಹಿರಂಗ, ಸುಸಜ್ಜಿತ, ಭಾಷಾ ಶ್ರೇಷ್ಠತೆ ಮತ್ತು ಕೋಮುವಾದ ಸಮರ್ಥನೆಯ, ವಿಷಪೂರಿತ, ವಲಸೆವಿರೋಧೀ ಆಂದೋಲನಗಳೂ ಸೇರಿದಂತೆ ಎಲ್ಲ ಬಗೆಯ ಅವಮಾನ, ಕಿರುಕುಳಗಳಿಗೆ, ಬಲಿಯಾಗಿದ್ದಾರೆ. ಅಸ್ಸಾಮಿನಲ್ಲಿ ನಡೆದ ಕೊಕ್ರಾಝರ್ ಹಿಂಸೆಯ ಹಿನ್ನೆಲೆಯಲ್ಲಿ, ದುಷ್ಟ ಎಸ್ಎಮ್ಎಸ್ ಗಳಿಂದ ಪ್ರಚೋದಿತಗೊಂಡು, ಬೆಂಗಳೂರು, ಹೈದರಾಬಾದ್ ಮತ್ತು ಚನ್ನೈಗಳಂಥ ನಗರಗಳಲ್ಲಿ ಕೆಲಸಮಾಡುತ್ತಿದ್ದ ಅಸ್ಸಾಂ, ಮತ್ತು ಈಶಾನ್ಯ ರಾಜ್ಯಗಳ ಕಾರ್ಮಿಕರು ಭಯಭೀತರಾಗಿ ತಮ್ಮ ಊರುಗಳಿಗೆ ಧಾವಿಸಿದ ಘಟನೆ ಭಾರತದ ಲಕ್ಷಾಂತರ ವಲಸೆ ಕಾರ್ಮಿಕರ ದಿನನಿತ್ಯದ ಜೀವನ ಎಷ್ಟೊಂದು ದುರ್ಬಲ-ಸೂಕ್ಷ್ಮ ಮತ್ತು ಅಭದ್ರವಾಗಿದೆ ಎಂಬುದನ್ನು ತೋರಿಸಿದೆ. ಹರಿಜನ-ಗಿರಿಜನ ದೌರ್ಜನ್ಯ ಕಾಯಿದೆಯ ಮಾದರಿಯಲ್ಲೇ ವಲಸೆ ಕಾರ್ಮಿಕರ ದೌರ್ಜನ್ಯ ಕಾಯಿದೆಗಾಗಿ ನಾವು ಹೋರಾಡಬೇಕಿದೆ.
36. ಕಾರ್ಮಿಕರ ವಲಸೆಯ ಈ ಚಿತ್ರ ಅಂತರ ರಾಜ್ಯ ಕಾರ್ಮಿಕ ವಲಸೆಗೆ ಮಾತ್ರ ಸೀಮಿತವಾಗಿಲ್ಲ. ಹೆಚ್ಚಿನ ಸಂಬಳ ಮತ್ತು ಉತ್ತಮ ಅವಕಾಶಗಳಿಗಾಗಿ ಕಾರ್ಮಿಕರು ಹೊರದೇಶಗಳಿಗೂ ವಲಸೆ ಹೋಗುವುದು ಹೆಚ್ಚಾಗುತ್ತಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತದ ವೈದ್ಯರು, ಶಿಕ್ಷಕರು, ಮಾಹಿತಿ ತಂತ್ರಜ್ಞಾನ ಪರಿಣತರು ಮುಂತಾದ ಉದ್ಯೋಗಸ್ಥರು ತಮ್ಮ ಹಕ್ಕುಗಳಿಗಾಗಿ ದಶಕಗಳಕಾಲ ಹೋರಾಡಿ, ಉತ್ತರ ಅಮೆರಿಕಾ, ಯೂರೋಪ್ ಮತ್ತು ಆಸ್ತ್ರೇಲಿಯಾದ ಕೆಲವು ಭಾಗಗಳಲ್ಲಿ ಪ್ರತಿಷ್ಠಿತರಾಗಿದ್ದರೂ, ವಿದೇಶಗಳಲ್ಲಿನ ‘ಬ್ಲೂ ಕಾಲರ್’ ಭಾರತೀಯ ಕಾರ್ಮಿಕರು ಜನಾಂಗೀಯ ತಾರತಮ್ಯ, ಆಕ್ರಮಣ ಮತ್ತು ಕೆಲವೊಮ್ಮೆ  ಅರೆಗುಲಾಮೀ ಸ್ಥಿತಿಯಲ್ಲಿ ಕೆಲಸಮಾಡಬೇಕಾದ ದುರ್ಭರ ವಾಸ್ತವವನ್ನು ಎದುರಿಸುತ್ತಿದ್ದಾರೆ. ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ಕಾರ್ಮಿಕರು ಭಾರತಕ್ಕೆ ಸಲ್ಲಿಸುತ್ತಿರುವ ಹಣದ ಒಟ್ಟು ಮೊತ್ತ ವಿದೇಶೀ ಬಂಡವಾಳದ ಮೊತ್ತಕ್ಕಿಂತ ದೊಡ್ಡದಾಗಿದ್ದರೂ ಭಾರತ ಸರ್ಕಾರ ವಿದೇಶಗಳಲ್ಲಿನ ಭಾರತೀಯ ಕೆಲಸಗಾರರು ಎದುರಿಸುತ್ತಿರುವ ಅಭದ್ರತೆಗೆ ಬೆನ್ನು ಮಾಡಿದೆ. ಅಷ್ಟೇ ಅಲ್ಲ, ವಿದೇಶೀ ಬಂಡವಾಳವನ್ನು ಆಕರ್ಷಿಸಲು ಏನೆಲ್ಲಾ ಕಸರತ್ತು ಮಾಡುತ್ತಿದೆ.

  ಕಟ್ಟಡ ಕಾರ್ಮಿಕರು
37. ಭೂ ವ್ಯವಹಾರ ದೇಶದಾದ್ಯಂತ ಒಮ್ಮೆಗೇ ಹೆಚ್ಚಾಗಿದ್ದರ ಪರಿಣಾಮವಾಗಿ, ಕೃಷಿ ವಲಯವನ್ನು ಬಿಟ್ಟರೆ, ಉದ್ಯೋಗಾವಕಾಶಗಳನ್ನು ಒದಗಿಸುವ ಎರಡನೆಯ ದೊಡ್ಡ ಕ್ಷೇತ್ರವಾಗಿ ಕಟ್ಟಡ ನಿರ್ಮಾಣ ವಲಯ ಬೆಳೆದಿದೆ. ಕೇಂದ್ರೀಯ ಕಲ್ಯಾಣ ಕಾಯಿದೆ ಎಂಬುದೊಂದಿದ್ದರೂ, ಅದರ ಬಳಕೆ ಮಾತ್ರ ಕಾಟಾಚಾರದ, ಪಕ್ಷಪಾತದಿಂದ ಕೂಡಿದ ಅಸ್ತವ್ಯಸ್ತ ಅನುಷ್ಠಾನವಾಗಿದೆ. ಹಲವಾರು ರಾಜ್ಯಗಳಲ್ಲಿ ಈ ವಲಯವನ್ನು ಯೂನಿಯನೀಕರಿಸುವ ಕೆಲಸದಲ್ಲಿ ನಾವು ಕೊಂಚ ಪ್ರಗತಿ ಸಾಧಿಸಿದ್ದೇವೆ. ಇದರ ಆಧಾರದಿಂದ ನಾವು ಅಖಿಲ ಭಾರತ ಕಟ್ಟಡ ಕಾರ್ಮಿಕರ ಒಕ್ಕೂಟವೊಂದನ್ನು ಸ್ಥಾಪಿಸಿದ್ದೇವೆ. ಇದರಲ್ಲಿ ಕಟ್ಟಡ ನಿರ್ಮಾಣದ ಇತರ ವರ್ಗಗಳಾದ ಇಟ್ಟಿಗೆಗೂಡು ಕಾರ್ಮಿಕರ ಘಟಕ, ಜಲ್ಲಿಕಲ್ಲು ಒಡೆಯುವವರ ಘಟಕ, ಮತ್ತು ಸುಣ್ಣ-ಬಣ್ಣ ಕೆಲಸಗಾರರು, ನಲ್ಲಿ ಕೆಲಸಗಾರರು, ವಿದ್ಯುತ್- ರಿಪೇರಿ ಕೆಲಸಗಾರರು, ಕಬ್ಬಿಣ ಕಟ್ಟುವ ಕೆಲಸಗಾರರು, ಹೀಗೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಉದ್ಯೋಗಗಳ ಕೆಲಸಗಾರರನ್ನೂ ಇದೇ ಯೂನಿಯನ್ನಿಗೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದೇವೆ. ಈ ಸಂಘಟನೆಯ ಕಾರ್ಯಕರ್ತರನ್ನು ಕೇವಲ ವೆಲ್ಫೇರ್ ಏಜೆಂಟರೆಂದು ಕಾರ್ಮಿಕರು ತಪ್ಪು ತಿಳಿಯುವ ಅನಿವಾರ್ಯ ಅಪಾಯ ಈ ವಲಯದಲ್ಲಿ ಇದೆ. ಕೇವಲ ಸಂಘಟನೆಯ ಫಲಾನುಭವಿಗಳಾಗದೆ, ಸುಪ್ತ ಶಕ್ತಿಯ ಹೋರಾಟಗಾರರನ್ನಾಗಿ ಈ ಕಾರ್ಮಿಕರನ್ನು ಸಂಘಟಿಸುವ ಬಗೆ ಹೇಗೆಂಬ ಮುಖ್ಯ ಪ್ರಶ್ನೆ ಇನ್ನೂ ಬಗೆಹರಿಯಬೇಕಾಗಿದೆ.
38.  ಉಡುಪು ಮತ್ತು ಪಾದರಕ್ಷೆ, ವಜ್ರಗಳನ್ನು ಕತ್ತರಿಸುವುದು ಮತ್ತು ಸಾಣೆ ಹಿಡಿಯುವುದು, ಬಾಲಕಾರ್ಮಿಕರನ್ನು ವ್ಯಾಪಕವಾಗಿ ಬಳಸುವ ಬೆಂಕಿಕಡ್ಡಿ ತಯಾರಿಕೆ, ಸಿದ್ಧ ಉಡುಪು ಇವೇ ಮುಂತಾದ ಶ್ರಮ ಕೇಂದ್ರಿತ ಉತ್ಪಾದನಾ/ಜೋಡಣಾ ಕಾರ್ಯಗಳಲ್ಲಿ ನಿರತರಾಗಿರುವ ಅಸಂಘಟಿತ ಅಥವಾ ದುರ್ಬಲ ಸಂಘಟನೆಗಳ ಕಾರ್ಮಿಕರು ವಸ್ತುಶಃ ಬೆವರುಬಸಿಯುವ ಸ್ಥಿತಿಗಳಲ್ಲಿ ಕೆಲಸಮಾಡುತ್ತಿದ್ದಾರೆ. ಉಡುಪು ತಯಾರಿಕಾ ವಲಯವನ್ನೇ ಅತ್ಯುತ್ತಮ ದೃಷ್ಟಾಂತವಾಗಿ ತೆಗೆದುಕೊಳ್ಳುವುದಾದರೆ, 2004ರಲ್ಲಿ ಅಂತಾರಾಷ್ಟ್ರೀಯ ಬಹು ಎಳೆಗಳ ವ್ಯವಸ್ಥೆ (ಇಂಟರ್ನ್ಯಾಶನಲ್ ಮಲ್ಟಿ ಫೈಬರ್ ಅರೇಂಜ್ಮೆಂಟ್) ಕುಸಿದಮೇಲೆ ತೀವ್ರಗೊಂಡ ಅಂತಾರಾಷ್ಟ್ರೀಯ ಪೈಪೋಟಿಯಿಂದಾಗಿ ಉದ್ಯೋಗದ ಷರತ್ತುಗಳು ಮತ್ತು ಕೆಲಸದ ಸ್ಥಿತಿಗತಿಗಳು, ಉದಾಹರಣೆಗೆ ಕಡಿಮೆ ವೇತನ ಮತ್ತು ಹೆಚ್ಚಿನ ಉದ್ಯೋಗ ಅಭದ್ರತೆ ಮತ್ತಷ್ಟು ಹದಗೆಟ್ಟಿದೆ. ಭಾರತೀಯ ಉದ್ಯಮ ಬಾಂಗ್ಲಾದೇಶದಿಂದ ಮತ್ತು ಚೀನಾ ಸೇರಿದಂತೆ ಿಇತರ ೇಏಷ್ಯಾದೇಶಗಳಿಂದ ತೀವ್ರ ಪೈಪೋಟಿಯನ್ನು ಎದುರಿಸಬೇಕಾಗಿ ಬಂತು. ಮತ್ತು ಇಡೀ ಭಾರ ಕಾರ್ಮಿಕರಿಗೆ ವರ್ಗಾವಣೆಯಾಯಿತು.

  ಮಹಿಳಾ ಕಾರ್ಮಿಕರು
39. ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಆಶಾ ಮತ್ತು ಅಂಗನವಾಡಿ ಕ್ಷೇತ್ರಗಳಲಲ್ಲದೆ ಇತರ ವಲಯಗಳಾದ ಮನೆಗೆಲಸ, ಬೀಡಿ ಕಟ್ಟುವುದು, ಶಾಲೆಗಳಲ್ಲಿ ಬಿಸಿ ಊಟ ತಯಾರಿಕೆ ಮುಂತಾದ ಕಾರ್ಯಕ್ಷೇತ್ರಗಳಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಷ್ಟೋ ಉತ್ಪದನಾ ವಲಯಗಳಲ್ಲಿ ‘ಅತಿ ಅಗ್ಗದ, ಚುರುಕು ಬೇಕಿಲ್ಲದ’ ಶ್ರಮಶಕ್ತಿ ಹುಡುಕಾಟ ಎಷ್ಟೋಸಲ ಉದ್ಯೋಗದ ಮಹಿಳೀಕರಣಕ್ಕೆ ಹೆಚ್ಚು ಹೆಚ್ಚು ದಾರಿಮಾಡಿಕೊಡುವುದರಿಂದ ಕಷ್ಟ ನಿವಾರಣೆಗಾಗಿ ಗ್ರಾಮೀಣ ಪ್ರದೇಶಗಳಿಂದ ವಲಸೆಬರುವ ಮಹಿಳೆಯರ ಸಂಖ್ಯೆ ಬೆಳೆಯುತ್ತಿದೆ.
40. ಪಿತೃಪ್ರಧಾನ ಪೂರ್ವಗ್ರಹ ಮತ್ತು ದ್ವೇಷ, ಜೊತೆಗೆ ನೇರ ಲೈಂಗಿಕ ಕಿರುಕುಳ ವರ್ಗ ಶೋಷಣೆಯೊಂದಿಗೆ ಸೇರಿ ಮಹಿಳಾ ಕಾರ್ಮಿಕರ ಜೀವನ ದುಪ್ಪಟ್ಟು ಕಷ್ಟಕರವಾಗುತ್ತಿದೆ. ಆದ್ದರಿಂದಲೇ ಅಂಗನವಾಡಿಯಿಂದ ಹಿಡಿದು ಅನೇಕ ವಿಮಾನಯಾನ ಕಂಪೆನಿಗಳವರೆಗೂ ಎಲ್ಲಿನೋಡಿದರೂ ಮಹಿಳಾ ಕಾರ್ಯಕರ್ತರು ಎಚ್ಚೆತ್ತು ಹೋರಾಟ ಮಾಡುತ್ತಿದ್ದಾರೆ. ಐಪ್ವಾ ಮತ್ತು ಎಐಸಿಸಿಟಿಯು ಇತ್ತ -ಸಾಧ್ಯವಿರುವಕಡೆಗಳಲ್ಲೆಲ್ಲಾ ಜಂಟಿಯಾಗಿ- ವಿಶೇಷ ಗಮನ ಹರಿಸಬೇಕು. ಮೇಲೇಳುತ್ತಿರುವ ಮಹಿಳಾ ಕಾರ್ಮಿಕರ ಬಣ ತನ್ನನ್ನು ಸಂಘಟಿಸಿಕೊಂಡು ತನ್ನ ಹಕ್ಕುಗಳಿಗಾಗಿ ಹೋರಾಡಲು ಪ್ರೋತ್ಸಾಹಿಸಬೇಕು ಮತ್ತು ಸಾಧ್ಯವಿರುವ ರೀತಿಗಳಲ್ಲೆಲ್ಲಾ ಸಹಾಯಮಾಡಬೇಕು. ಮಹಿಳಾಕಾರ್ಮಿಕರ ಸ್ಥಿತಿಗತಿಗಳ ಸಮಗ್ರ ಅಧ್ಯಯನ ಮಾಡಲು ಸಮಿತಿಯೊಂದನ್ನು ನೇಮಿಸುವಂತೆ ಮತ್ತು ಅದರ ಶಿಫಾರಸುಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.

  ಸಂಘಟಿತ ವಲಯದ ಸಂಖ್ಯಾಗಾತ್ರದ ಇಳಿಕೆ.
41. ಸಂಘಟಿತ ವಲಯ ಭಾರತದ ಒಟ್ಟು ಶ್ರಮಶಕ್ತಿಯ ಶೇಕಡ 5 ಕ್ಕಿಂತಲೂ ಕಡಿಮೆ ಇರುವ, ಸಂಖ್ಯಾ ದೃಷ್ಟಿಯಿಂದ ನೋಡಿದರೆ, 3 ಕೋಟಿಗಿಂತಲೂ ಕಡಿಮೆ ಇರುವ ಕಾರ್ಮಿಕರನ್ನು ದುಡಿಸಿಕೊಳ್ಳುತ್ತದೆ. ಆದರೆ,   ಯೂನಿಯನೀಕರಣದ ಪ್ರಮಾಣ, ಹೋರಾಟದ ಅನುಭವ ಮತ್ತು ಆ ಪ್ರಕ್ರಿಯೆಯಲ್ಲಿ ಗಳಿಸಿದ ಹಕ್ಕುಗಳ ದೃಷ್ಟಿಯಿಂದ ಸಂಘಟಿತ ವಲಯದ ಕಾರ್ಮಿಕರೇ ಬಾರತೀಯ ಶ್ರಮಿಕವರ್ಗದ ಮೂಲಶಕ್ತಿಯಾಗಿದ್ದಾರೆ. ನವ ಉದಾರವಾದೀ ಸುಧಾರಣೆಗಳು ಸಂಘಟಿತ ವಲಯದ ಮುಖ್ಯ ಘಟಕಗಳ ಕಾರ್ಮಿಕರ ಮೇಲೆ ಮಾಡಿದ ನಿರಂತರ ಆಕ್ರಮಣದಿಂದ ಕಾರ್ಮಿಕರು ತಮ್ಮ ಸಂಖ್ಯಾಗಾತ್ರದ ಇಳಿಕೆ ಹಾಗೂ ಹೊರಗುತ್ತಿಗೆಗಳೆಂಬ ಅವಳಿ ಒತ್ತಡಗಳನ್ನು ಎದುರಿಸುವಂತಾಗಿದೆ. ಒಂದುಕಡೆ ಕ್ರಾಂತಿಕಾರೀ ಟ್ರೇಡ್ ಯೂನಿಯನ್ ಚಳುವಳಿ ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟಿಸಲು ಯತ್ನಿಸುತ್ತಿದ್ದರೆ ಮತ್ತೊಂದು ಕಡೆ ನವ ಸುಧಾರಣಾವಾದೀ ಆಕ್ರಮಣ ಸಂಘಟಿತ ವಲಯವನ್ನೇ ಅಸಂಘಟಿತ ವಲಯವನ್ನಾಗಿಸಲು ಉದ್ದೇಶಿಸುತ್ತಿದೆ. ಸಂಘಟಿತ ವಲಯದ ಪ್ರಧಾನ ಕಂಬಗಳಾದ ರೈಲ್ವೆ, ದೂರಸಂಪರ್ಕ, ಉಕ್ಕು, ಕಲ್ಲಿದ್ದಲು, ಬ್ಯಾಂಕುಗಳು ಮತ್ತು ವಿಮಾ ಕ್ಷೇತ್ರಗಳನ್ನು ಗಮನಿಸಿದರೆ ಈ ಪ್ರಕ್ರಿಯೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದು.
42. ರೈಲ್ವೆಯ ಚಕ್ರಗಳು ರೈಲ್ವೆ ಕಾರ್ಮಿಕರ ಎದೆಗಳ ಮೇಲೆ ಉರುಳುತ್ತಿವೆ. 20 ಲಕ್ಷದಷ್ಟಿದ್ದ ರೈಲ್ವೆ ಕಾರ್ಮಿಕಶಕ್ತಿ , ಸ್ವಚ್ಛತೆ, ಉಪಾಹಾರವ್ಯವಸ್ಥೆ, ಸಿಗ್ನಲ್ ವ್ಯವಸ್ಥೆ, ಹಳಿಗಳ ಮತ್ತು ರೈಲ್ವೆ ಬೋಗಿಗಳ ಸುಸ್ಥಿತಿ ಮತ್ತು ರಿಪೇರಿ, ಪರಿಕರಗಳ ತಯಾರಿಕೆ ಇವೇ ಮುಂತಾದ ಕೆಲಸಗಳನ್ನು ಒಂದೇ ಸಮನೆ ಖಾಸಗೀಕರಣ ಮತ್ತು ಹೊರಗುತ್ತಿಗೆ ಪ್ರಕ್ರಿಯೆಗಳಿಗೆ ಒಳಪಡಿಸುತ್ತಿರುವುದರ ಫಲವಾಗಿ ಇಂದು 10 ಲಕ್ಷಕ್ಕಿಂತ ತುಸು ಹೆಚ್ಚು ಎನ್ನುವಷ್ಟು ಕಡಿಮೆಯಾಗಿದೆ. 2.4 ಲಕ್ಷದಷ್ಟು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. 4 ಲಕ್ಷದ ವರೆಗೆ ಖಾಯಂ ಕಾರ್ಮಿಕ ಶಕ್ತಿಯನ್ನು ನಾಲ್ಕು ಹಂತಗಳಲ್ಲಿ ಕಡಿಮೆ ಮಾಡಬೇಕೆಂಬ ಪ್ರಸ್ತಾವ ಇದೆ. ಆದರೆ ರೈಲುಗಳ ಸಂಖ್ಯೆಯನ್ನು ಅನೇಕ ಪಟ್ಟು ಹೆಚ್ಚಿಸಲಾಗಿದೆ. ರೈಲುಗಳ ಸರಾಸರಿ ವೇಗವನ್ನು ಎರಡರಷ್ಟು ಜಾಸ್ತಿ ಮಾಡಿದ್ದಾರೆ. ಇದೆಲ್ಲಾ ರೈಲ್ವೆ ವ್ಯವಸ್ಥೆ ಮತ್ತು ಕಾರ್ಮಿಕರ ಮೇಲೆ ಅಗಾಧ ಒತ್ತಡವನ್ನು ಹಾಕುವುದರಿಂದ ಹೆಚ್ಚು ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಸೇವೆಯ ಗುಣಮಟ್ಟ ಹದಗೆಡುತ್ತಾ ಹೋಗುತ್ತದೆ.
43. ಇದೇ ಬಗೆಯ ಪರಿಸ್ಥಿತಿ ಕಲ್ಲಿದ್ದಲು ಮತ್ತು ದೂರಸಂಪರ್ಕ ವಲಯಗಳಲ್ಲೂ ಇದೆ. 1973 ರಲ್ಲಿ ಕಲ್ಲಿದ್ದಲು ವಲಯವನ್ನು ರಾಷ್ಟ್ರೀಕರಿಸಿದಾಗ 7.2 ಲಕ್ಷ ಕಾರ್ಮಿಕರು 60 ದಶಲಕ್ಷ ಟನ್ ಕಲ್ಲಿದ್ದಲನ್ನು ಉತ್ಪಾದಿಸುತ್ತಿದ್ದರು. ಈಗ 3.5 ಲಕ್ಷ ಕಾರ್ಮಿಕರು 434 ದಶಲಕ್ಷ ಟನ್ ಕಲ್ಲಿದ್ದಲನ್ನು ಉತ್ಪಾದಿಸುತ್ತಾರೆ. ಇದರಲ್ಲಿ ಶೇಕಡ 52 ರಷ್ಟನ್ನು ಹೊರಗುತ್ತಿಗೆ ಪಡೆದ ಬೇರೆ ಬೇರೆ ಗುತ್ತಿಗದಾರರ ಕೈಕೆಳಗಿನ ಗುತ್ತಿಗೆ ಕಾರ್ಮಿಕರು ಉತ್ಪಾದಿಸಿತ್ತಾರೆ. ದೂರಸಂಪರ್ಕ ದ ಕತೆಯೂ ಇದೇ. ಸರ್ಕಾರ ಸ್ವಾಮ್ಯದ ಬಿಎಸ್ಎನ್ಎಲ್ ಇಂದು 65 ದಶಲಕ್ಷ ನಿಸ್ತಂತು ದೂರವಾಣಿ ಬಳಕೆದಾರರು ಮತ್ತು 27.9 ದಶಲಕ್ಷ ಸ್ಥಿರ ದೂರವಾಣಿ ಬಳಕೆದಾರರಿಗೆ ಸೇವೆಯೊದಗಿಸುತ್ತಿದೆ. ಆದರೆ ಕಾರ್ಮಿಕ ಪಡೆಯ ಗಾತ್ರ 3 ಲಕ್ಷ ಕ್ಕಿಂತಲೂ ಕಡಿಮೆಯಾಗಿದೆ. ಇದರ ಅರ್ಥ: 1983 ರಲ್ಲಿ ಸಿಬ್ಬಂದಿಗೂ ಸೇವೆಗೂ ಇದ್ದ ಪರಿಮಾಣ 50:1000. 2003 ರಲ್ಲಿ ಅದು 10:1000 ಕ್ಕೆ ಕುಸಿಯಿತು. ಇಂದು ಅದೇ 3:1000 ಆಗಿದೆ!
44. ಆರ್ಥಿಕ ವಲಯದ- ಬ್ಯಾಂಕ್ ಮತ್ತು ವಿಮಾ ಉದ್ಯೋಗಿಗಳು, ಭಾರತದ ಆರ್ಥಿಕತೆಯ ಈ ಮುಖ್ಯ ವಲಯಗಳನ್ನು ಖಾಸಗೀಕರಿಸುವ ಕ್ರಮಗಳನ್ನು, ಕಳೆದೆರಡು ದಶಕಗಳ ನವ ಉದಾರವಾದೀ ಸುಧಾರಣೆಗಳಿಗೆ ತೆರೆದಿಡುವ ಕ್ರಮಗಳನ್ನು ಯಶಸ್ವಿಯಾಗಿ ವಿರೋಧಿಸಿದರು. ಆದರೆ ಶಕ್ತಿಶಾಲೀ ವಿದೇಶೀ ಬ್ಯಾಂಕುಗಳು ಮತ್ತು ವಿಮಾ ಕಂಪೆನಿಗಳ ಪ್ರವೇಶದಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಿಮಾ ನಿಗಮಗಳ ವಿರೋಧ ಕ್ರಮೇಣ ತಣ್ಣಗಾಗುತ್ತಿದೆ. ‘ವಿಮಾ ಕಾಯಿದೆ (ತಿದ್ದುಪಡಿ) ಮಸೂದೆ 2008’, ಮತ್ತು’ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2011’, ಗಳ ಅನುಮೋದನೆಯಿಂದಾಗಿ ಖಾಸಗೀಕರಣದ ಆಕ್ರಮಣಕಾರೀ ವೇಗ ಮತ್ತಷ್ಟು ಹೆಚ್ಚಿದೆ. ಜೊತೆಗೆ ಈಗ ಪಿಂಚಣಿ ಮತ್ತು ಪಿಎಫ್ ವಲಯಗಳಲ್ಲಿ ಶೇಕಡ 49 ರಷ್ಟು ವಿದೇಶೀ ನೇರ ಬಂಡವಾಳವನ್ನು ಹೂಡಲು ಅವಕಾಶ ಮಾಡಿಕೊಡುವ ‘ಪಿಂಚಣಿ ಫಂಡ್ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆ (ಪಿಎಫ್ಆರ್ ಡಿಎ) 2011’ ಬಂದಿದೆ. ಈ ಕ್ರಮದಿಂದಾಗಿ ಫಂಡ್ ಮೇನೇಜರುಗಳಿಗೆ ಎಲ್ಲಿ ಬೇಕಾದರೂ ಬಂಡವಾಳ ಹೂಡುವ, (ಅಂದರೆ ವಾಸ್ತವವಾಗಿ ಇದು ದೇಶೀಯ ಸಂಪತ್ತನ್ನು ವಿದೇಶಗಳಲ್ಲಿ ಬಂಡವಾಳವಾಗಿ ಹೂಡುವ ‘ರಿವರ್ಸ್ ಎಫ್ ಡಿ ಐ’), ಭಾರತದ ಕಾರ್ಮಿಕ ವರ್ಗ ಬೆವರು ಹರಿಸಿ ಸಂಪಾದಿಸಿದ ಸಾವಿರಾರು ಕೋಟಿ ಹಣದ ಜೊತೆ ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಆಟವಾಡುವ, ಭಾರೀ ಲಾಭಕ್ಕಾಗಿ ಷೇರು ಮಾರುಕಟ್ಟೆಯ ಜೂಜಿನಲ್ಲಿ ತೊಡಗಿಸಿ ಮಜಾ ಮಾಡುವ ಸ್ವಚ್ಛಂದತೆ ದೊರೆಯುತ್ತದೆ.
45. ಸಾರ್ವಜನಿಕ ವಲಯದ ಮತ್ತು ಸರ್ಕಾರೀ ವಲಯದ ಕಾರ್ಮಿಕರ ಜೊತೆ ಸೇರಿ ನಾವು ಮಾಡಬೇಕಾದ ಕೆಲಸ ಇನ್ನೂ ಸೀಮಿತವಾಗೇ ಇದೆ. ರೈಲ್ವೆಯ ಮೂರು ವಲಯಗಳಲ್ಲಿ ಮತ್ತು ಒಂದು ಉತ್ಪಾದನಾ ಘಟಕದಲ್ಲಿ ನಮ್ಮ ಯೂನಿಯನ್ ಗಳನ್ನು ಸ್ಥಾಪಿಸಿದ್ದೇವೆ. ಉಳಿದ ಕಡೆಗಳಲ್ಲಿ ಮುಖ್ಯವಾಹಿನಿಯ ಯೂನಿಯನ್ ಗಳೊಳಗೇ ಕೆಲಸ ಮಾಡುತ್ತಿದ್ದೇವೆ. ಕಲ್ಲಿದ್ದಲು ಮತ್ತು ಉಕ್ಕು-ಕಬ್ಬಿಣದ ವಲಯಗಳಲ್ಲಿ ನಮ್ಮ ಯೂನಿಯನ್ ಗಳು ಇವೆಯಾದರೂ, ಕಾಲ ಕಾಲಕ್ಕೆ ತಮ್ಮ ಸುಪ್ತ ಶಕ್ತಿಯನ್ನು ಪ್ರದರ್ಶಿಸುತ್ತಿದ್ದರೂ ಇನ್ನೂ ಕೆಲವೇ ಘಟಕಗಳಿಗೆ ಇವು ಸೀಮಿತಗೊಂಡಿವೆ. ಶೀಘ್ರವಾಗಿ ಬೆಳೆಯುವ ಶಕ್ತಿ ಮತ್ತು ಹೆಚ್ಚಿನ ಪಾತ್ರವನ್ನು ವಹಿಸುವ ಸಾಮರ್ಥ್ಯ ಇನ್ನೂ ಬರಬೇಕಾಗಿದೆ. ಬ್ಯಾಂಕು, ವಿಮಾ ಮತ್ತು ದೂರಸಂಪರ್ಕ ವಲಯಗಳಲ್ಲಿ ನಮ್ಮ ಸಂಗಾತಿಗಳು ಎಡಪಂಥೀಯ ಮುಂದಾಳತ್ವದ ಮುಖ್ಯವಾಹಿನಿ ಯೂನಿಯನ್ ಗಳೊಟ್ಟಿಗೆ ಕೆಲಸಮಾಡುತ್ತಿದ್ದಾರೆ. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಸರ್ಕಾರೀ ಉದ್ಯೋಗಿಗಳ ಚಳುವಳಿಗಳಲ್ಲಿ ನಮ್ಮ ಪ್ರಧಾನ ಪಾತ್ರವಿದೆ. ಉತ್ತರಾಖಂಡದಲ್ಲೂ ನಮಗೆ ಗಣನೀಯ ಬೆಂಬಲವಿದೆ. ಇತರ ಬೇರೆ ಬೇರೆ ರಾಜ್ಯಗಳಲ್ಲಿ ಅಷ್ಟಿಷ್ಟು ಪ್ರಭಾವ ಹೊಂದಿದ್ದೇವೆ. ಆದರೂ ಈ ಸಂಬಂಧ ರಾಷ್ಟ್ರೀಯ ಸಮನ್ವಯ ಸಾಧಿಸಬೇಕೆನ್ನುವ ವಿಷಯದಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ.
46. ಸಾರ್ವಜನಿಕ ಉದ್ಯಮದಲ್ಲಿನ ನಮ್ಮ ಕೆಲಸದಲ್ಲಿ, ಈ ಉದ್ಯಮದ ಕಾರ್ಮಿಕ ಶಕ್ತಿಯ ಅರ್ಧಕ್ಕಿಂತಲೂ ಹೆಚ್ಚಿರುವ ಗುತ್ತಿಗೆ ಕಾರ್ಮಿಕರ ಬಗ್ಗೆ ಅತ್ಯಂತ ಹೆಚ್ಚಿನ ಗಮನವನ್ನು ಕೊಡಬೇಕು. ವೃದ್ಧಿಸುತ್ತಿರುವ ಅವರ ಸಂಖ್ಯೆ ಮತ್ತು ಮೂಲ ಉತ್ಪಾದನಾ ಚಟುವಟಿಕೆಗಳಲ್ಲಿ ಅವರ ಪಾತ್ರ ಮುಖ್ಯದ್ದಾಗಿದ್ದರೂ ಸಹ ಅವರನ್ನು ದ್ವಿಪಕ್ಷೀಯ ಒಪ್ಪಂದಗಳ ಆಚೆಯೇ ಇಡಲಾಗಿದೆ. ಮೇನೇಜ್ ಮೆಂಟ್- ಗುತ್ತಿಗೆದಾರ ದುಷ್ಟಕೂಟದ ಆಕ್ರಮಣವನ್ನು ದಿನನಿತ್ಯ ಎದುರಿಸಬೇಕಾಗಿರುವ ಅವರಿಗೆ ಉದ್ಯಮದಲ್ಲಿನ ಯೂನಿಯನ್ ಗಳಿಗೆ ಮಾನ್ಯತೆ ಸಿಗಲು ಬೇಕಾದ ಓಟಿನ ಹಕ್ಕನ್ನೂ ನಿರಾಕರಿಸಲಾಗಿದೆ. ಖಾಯಂ ನೌಕರರು ಮತ್ತು ಗುತ್ತಿಗೆ ಕಾರ್ಮಿಕರ ಸದ್ಯದ ಹಿತಾಸಕ್ತಿಗಳನ್ನು ಕಾಪಾಡುತ್ತಲೇ, ಖಾಸಗೀಕರಣ, ಖಾಸಗಿ-ಸಾರ್ವಜನಿಕ ಸಹಭಾಗಿತ್ವಗಳ ವಿರುದ್ಧ ಬಲವಾಗಿ ಹೋರಾಡುತ್ತಲೇ, ಭ್ರಷ್ಟಾಚಾರ, ಅನ್ಯಾಯ ಮತ್ತು ಕಾರ್ಮಿಕರ ಪ್ರಜಾತಾಂತ್ರಿಕ ಹಕ್ಕುಗಳನ್ನು ಮೊಟಕುಗೊಳಿಸುವುದರ ವಿರುದ್ಧ ಧೈರ್ಯದಿಂದ ಕಾರ್ಮಿಕರ ಧ್ವನಿಯನ್ನು ಎತ್ತಬೇಕಾಗಿದೆ.
  ರೋಗಗ್ರಸ್ತವಾಗಿಸಿದ ಮತ್ತು ಮುಚ್ಚಿಸಲ್ಪಟ್ಟ ಉದ್ಯಮಗಳು
47. ಬೆರಳೆಣಿಕೆಯ ಉದ್ಯಮಗಳು ತಾವಾಗಿಯೇ ರೋಗಗ್ರಸ್ತವಾಗುತ್ತವೆ. ಬಹಳಷ್ಟು ಉದ್ಯಮಗಳನ್ನು ನಯವಂಚನೆಯ ಕೈಗಾರಿಕೋದ್ಯಮಿಗಳು ಮತ್ತು ಸರ್ಕಾರಗಳು ಸೇರಿ ರೋಗ್ರಸ್ತವನ್ನಾಗಿಸುತ್ತವೆ. ಭಾರತದ ಔದ್ಯಮಿಕ ನಕ್ಷೆಯಲ್ಲಿ ಮುಚ್ಚಲ್ಪಟ್ಟ ಫ್ಯಾಕ್ಟರಿಗಳ ಚುಕ್ಕೆಗಳು ಸಾಂದ್ರವಾಗುತ್ತಾ ಹೋದಂತೆ, ರೋಗಗ್ರಸ್ತ ಮತ್ತು ಮುಚ್ಚಲ್ಪಟ್ಟ ಫ್ಯಾಕ್ಟರಿಗಳ ಕಾರ್ಮಿಕರು ಮತ್ತು ಮಾಜಿ ನೌಕರರದ್ದೇ ಒಂದು ವಿಭಾಗವಾಗಿಬಿಟ್ಟಿದೆ. ಅವರ ಕಷ್ಟ-ಕಾರ್ಪಣ್ಯಗಳಿಗೆ ಮೇರೆಯೇ ಇಲ್ಲ. ಆದರೂ ಅವರು ಜವಳಿ, ಸೆಣಬು ಮತ್ತು ಇಂಜಿನಿಯರಿಂಗ್ ನಂಥ ಅಸ್ತಂಗತ ಉದ್ಯಮಗಳಲ್ಲಿ, ಭೂ ವಿವಾದ ಮತ್ತು ಪಿಎಫ್/ಗ್ರಾಚುಯಿಟಿ ಬಾಕಿ, ಮುಂತಾದ ಹೊಸ ಪ್ರಶ್ನೆಗಳನ್ನು ಬಗೆಹರಿಸಲು ಹಮ್ಮಿಕೊಳ್ಳುವ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸಾರಿಗೆಯ ನೌಕರರಲ್ಲಿ ಬಹಳಷ್ಟು ಜನರಿಗೆ ಸಂಬಳ ಮತ್ತು ಬರಬೇಕಾದ ಬಾಕಿ ಸಿಗುತ್ತಿಲ್ಲ. ಅವರಲ್ಲಿ ಕೆಲವರು ಕಾನೂನಿನ ಪ್ರಕಾರವೇ ಬಾಕಿಯಿರುವ ಹಣಕ್ಕಾಗಿ ಹೋರಾಟ ಜಾರಿಯಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
48. ಮುಚ್ಚಿರುವ ಮಿಲ್ಲುಗಳ ಮಾಜಿ ಕಾರ್ಮಿಕರು ಸಹ ದೃಢ ನಿಶ್ಚಯದ ಹೋರಾಟದಿಂದ ಕಡೆಪಕ್ಷ ಬರಬೇಕಾದ ಬಾಕಿ ಹಣವನ್ನಾದರೂ ಪಡೆಯಬಹದೆಂದು ಅನುಭವದಿಂದ ಗೊತ್ತಾಗಿದೆ. ಉದಾಹರಣೆಗೆ, ಮುಂಬೈನ ಜವಳಿ ಕಾರ್ಮಿಕರು 1982 ರ ಚರಿತ್ರಾರ್ಹ ಮುಷ್ಕರದಲ್ಲಿ ಕಳೆದುಕೊಂಡಿದ್ದ ಭೂಮಿಯನ್ನು ಮತ್ತೆ, ಅಂದರೆ, ಮೂರು ದಶಕಗಳ ನಂತರ ಪಡೆದುಕೊಂಡಿದ್ದಾರೆ. ಅವರು ಸಂಘಟಿತರಾಗಿ ಕಾನೂನು ಹೋರಾಟಗಳೂ ಸೇರಿದಂತೆ ಅನೇಕ ಬಗೆಯ ಹೋರಾಟಗಳಿಗೆ ಇಳಿದರು. ಮಹಾರಾಷ್ಟ್ರ ಸರ್ಕಾರ ಕೊನೆಗೂ ಮಣಿದು 1, 20,000 ಕಾರ್ಮಿಕರಿಗೆ ಪುನರ್ವಸತಿ ಮಾಡುವುದಾಗಿ ವಾಗ್ದಾನ ಮಾಡಬೇಕಾಯಿತು. ಅವರಲ್ಲಿ ಸುಮಾರು 6948 ಜನ ಕಾರ್ಮಿಕರಿಗೆ ಈಗಾಗಲೇ ಮುಂಬೈನ ಹೃದಯಭಾಗದಲ್ಲೇ ಭೂಮಿ ದೊರೆತಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ತಲಾ 50 ಲಕ್ಷ ಬೆಲೆಬಾಳುವ ಭೂಮಿ ಸುಮಾರು 5 ಲಕ್ಷಕ್ಕೇ ಸಿಕ್ಕಿದೆ. ಹಾಗೆಯೇ ಗೌರೀಪುರದ ಸೆಣಬಿನ ಗಿರಣಿಯಲ್ಲಿ (ಪಶ್ಚಿಮ ಬಂಗಾಳದ ಉತ್ತರ 24 ಪರಂಗಣ ಜಿಲ್ಲೆ) ಗಿರಣಿಯ ಪ್ರದೇಶದಲ್ಲಿ ಕಾರ್ಮಿಕರು ನಡೆಸಿದ ಪ್ರಚಾರಾಂದೋಲನ, ಚಳುವಳಿ ಹಾಗೂ ಕಾನೂನು ಕದನಗಳೂ ಸೇರಿದಂತೆ ವರ್ಷಾನುಗಟ್ಟಲೆ, ಚಲಬಿಡದೆ ಮಾಡಿದ ಹೋರಾಟದಿಂದಾದಿ ಅವರ ಪಿಎಫ್ ಮತ್ತು ಪಿಂಚಣಿಗಳ ಬಾಕಿ ಮೊತ್ತದ ಒಂದು ಭಾಗ ಸಿಕ್ಕಿತು. ಈಗ ಗ್ರಾಚುಯಿಟಿ, ಬಿಪಿಎಲ್ ಯೋಜನೆಯಲ್ಲಿ ಎಲ್ಲ ಕಾರ್ಮಿಕರನ್ನೂ ಸೇರಿಸಬೇಕೆಂಬ ಇತರ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ಮುಂದುವರೆದಿದೆ.
ಶ್ರಮಿಕವರ್ಗದ ಗುರುತರ ಜವಾಬ್ದಾರಿಗಳು ಮತ್ತು ಕಮ್ಯುನಿಸ್ಟ್ (ಸಾಮ್ಯವಾದೀ) ದರ್ಶನ
49. ವರ್ಗಶತ್ರು ಮತ್ತು ಪ್ರಭುತ್ವದ ವಿರುದ್ಧದ ತಮ್ಮ ಹೋರಾಟದಲ್ಲಿ ಕಾರ್ಮಿಕರು ಏಕಾಂಗಿಗಳಲ್ಲ. ಶ್ರಮಿಕ ವರ್ಗದ ಉಳಿದೆಲ್ಲಾ ವಿಭಾಗಗಳು, ಕೃಷಿಕರು, ಆದಿವಾಸಿಗಳು, ವಿಶೇಷವಾಗಿ ಯುವಕರು, ಮಧ್ಯಮವರ್ಗೀಯರು, ಬುದ್ಧಿಜೀವಿಗಳು, ಮತ್ತು ಸಮಾಜದ ಮತ್ತಿತರ ಸ್ತರಗಳ ಜನರು ತಮ್ಮ ಹಕ್ಕುಗಳನ್ನು, ಭೂಮಿಯನ್ನು, ಜೀವನಾಧಾರವಾದ ಅನ್ನವನ್ನು, ಕಾರ್ಪೊರೇಟ್-ಪ್ರಭುತ್ವ ಕಸಿದುಕೊಳ್ಳುತ್ತಿರುವ ತಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಕಾರ್ಪೊರೇಟ್- ಫ್ಯೂಡಲ್ ಮತ್ತು ಇಂಪೀರಿಯಲ್ ದುಷ್ಟಕೂಟದ ನೇತಾರನಾಗಿ ಭಾರಿ ಬಂಡವಳಿಗ ವರ್ಗ ಎದುರಿಗಿರುವಾಗ, ಶ್ರಮಿಕವರ್ಗ ಎಲ್ಲಾ ಶ್ರಮಿಕ ಸಮುದಾಯಗಳ ಹೋರಾಟಗಳನ್ನು ಒಗ್ಗೂಡಿಸಿ ಮುನ್ನಡೆಸುವ ನೇತಾರನಾಗಿ, ಒಂದು ಸಹಾಯ ಹಸ್ತವನ್ನು ಹೋರಾಡುತ್ತಿರುವ ರೈತಸಮುದಾಯಕ್ಕೂ ಮತ್ತೊಂದು ಸಹಾಯ ಹಸ್ತವನ್ನು ಜನ ಸಮುದಾಯದ ಎಲ್ಲ ವರ್ಗಗಳ, ಎಲ್ಲಾ ಪ್ರಜಾತಾಂತ್ರಿಕ ಹೋರಾಟಗಳಿಗೂ ನೀಡುತ್ತಾ ಸಾಗಬೇಕಾಗಿದೆ.
50. ಆದರೆ, ‘ಕಠಿಣ ಪರಿಸ್ಥಿತಿ’ ಮತ್ತು ‘ಇದು ರಕ್ಷಣಾತ್ಮಕ ಹೋರಾಟದ ಕಾಲ’ ಎಂಬ ನೆಪವೊಡ್ಡಿ ಪ್ರತಿಗಾಮಿ ಮತ್ತು ಪರಿಷ್ಕರಣವಾದಿ ದೃಷ್ಟಿಯನ್ನು ಹರಡುತ್ತಿರುವ ಟ್ರೇಡ್ ಯೂನಿಯನ್, ಮತ್ತಿತರ ಸಂಘಟನೆಗಳ ಸಮರ್ಥನಾತ್ಮಕ ನಿಲುವನ್ನು ಪ್ರಶ್ನಿಸದೆ ಹೋರಾಟದ ಮುನ್ನೆಡೆ ಸಾಧ್ಯವಾಗುವುದಿಲ್ಲ. ಎಲ್ಲಾ ರಕ್ಷಣಾತ್ಮಕತೆಯಲ್ಲೂ ಒಂದಿಷ್ಟು ಆಕ್ರಮಣಕಾರತೆ ಇರುತ್ತದೆ ಹಾಗೆಯೇ ಎಲ್ಲಾ ಆಕ್ರಮಣಕಾರತೆಯಲ್ಲಿಯೂ ಒಂದಿಷ್ಟು ರಕ್ಷಣಾತ್ಮಕತೆ ಇದ್ದೇ ಇರುತ್ತದೆ ಎಂಬುದು ದ್ವಂದ್ವಾತ್ಮಕ ಸತ್ಯ. ಬಂಡವಾಳದ ಇತ್ತೀಚಿನ ಆಕ್ರಮಣಗಳು ಅದರ ಶಕ್ತಿಯಿಂದ ಹುಟ್ಟಿದವುಗಳಲ್ಲ, ಬದಲಾಗಿ ಅದರ ದೌರ್ಬಲ್ಯಗಳಿಂದ, ಬಂಡವಾಳದ ಗಂಭೀರ ಸಮಸ್ಯೆಗಳಿಂದ; ಆದ್ದರಿಂದ  ಬಂಡವಾಳಕ್ಕೆ ಬಲವಾದ ಹೊಡೆತ ಕೊಡಲು ಇದೇ ಸರಿಯಾದ ಕಾಲ ಎಂಬ ವಾಸ್ತವಸತ್ಯವನ್ನು ಕಾರ್ಮಿಕ ಸಮುದಾಯಗಳಿಗೆ ತಿಳಿಸಿ ಹೇಳಬೇಕು. ದುಡಿಮೆಗಾರರ ವಿಶಾಲ, ಹೋರಾಟಮನೋಭಾವದ ಐಕ್ಯತೆಯಿಂದ ಧೀರೋದ್ದಾತ ಹೋರಾಟ ಹುಟ್ಟಬಲ್ಲ ಕಾಲ ಇದು. ಸಮಾಜದಲ್ಲಿನ, ಶ್ರಮಿಕರಲ್ಲದ ಇತರ ಸ್ತರಗಳ ಜನರನ್ನು ಒಗ್ಗೂಡಿಸಿ ಅಂತಿಮ ದಿಗ್ವಿಜಯದ ದಿನವನ್ನು ಹತ್ತಿರವಾಗಿಸುವ ಕಾಲ ಇದು. ಈ ವಿಶ್ವಾಸವನ್ನು ಜನಸಮುದಾಯದಲ್ಲಿ ಬಿತ್ತುವುದು ಅತ್ಯಂತ ಮುಂದುವರಿದ ವರ್ಗವಾದ ಶ್ರಮಿಕವರ್ಗದ ಮೊತ್ತಮೊದಲ ಕರ್ತವ್ಯ.
51. ಶ್ರಮಿಕವರ್ಗವನ್ನು ಈ ಉನ್ನತ ರಾಜಕೀಯ ಪ್ರಜ್ಞೆ ಮತ್ತು ಪಾತ್ರಕ್ಕೇರಿಸುವ ಕರ್ತವ್ಯ, ಶ್ರಮಿಕವರ್ಗದ ಅತ್ಯುನ್ನತ ಸಂಘಟನೆಯಾದ ಕಮ್ಯುನಿಸ್ಟ್ ಪಕ್ಷದ್ದಾಗಿದೆ. ಆದರೆ ರಾಜಕೀಯ ಪ್ರಜ್ಞೆಯನ್ನು ರೂಪಿಸುವುದೆಂದರೆ ಒಂದು ರೀತಿಯ ಕ್ರಿಯಾತ್ಮಕತೆಯನ್ನು ಮೇಲಿನಿಂದ ಹೇರುವುದಲ್ಲ, ಅಥವಾ ರಾಜಕೀಯ ಪ್ರಜ್ಞೆಯನ್ನು ಅಮೂರ್ತ ರೀತಿಯಲ್ಲಿ ಹೇಳುವುದಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶ್ರಮಿಕವರ್ಗ ನಿಜಜೀವನದ ಸವಾಲುಗಳನ್ನು ಎದುರಿಸುವ ಪ್ರಕ್ರಿಯೆಯಲ್ಲಿ,  ಹಂತಹಂತವಾಗಿ ತನ್ನ ಬಗೆಗಿನ ತಿಳುವಳಿಕೆಯನ್ನು ಅಂದರೆ, ಬಂಡವಾಳದ ಆಳ್ವಿಕೆಯನ್ನು ಕಿತ್ತೊಗೆಯಬೇಕಾದ ಚರಿತ್ರಾರ್ಹ ಕರ್ತವ್ಯ-ಧ್ಯೇಯದ ಪ್ರಜ್ಞೆಯನ್ನು ಪಡೆಯುವಂತೆ ನಾವು ಶ್ರಮಿಕ ವರ್ಗಕ್ಕೆ ಸಹಾಯ ಮಾಡಬೇಕು. ಈ ಗುರಿಯನ್ನು ಸಾಧಿಸುವಂತೆ ನಮ್ಮ ಟ್ರೇಡ್ ಯೂನಿಯನ್ ಕೇಂದ್ರ ತನ್ನ ರಾಜಕೀಯ ಪಾತ್ರವನ್ನು ವಿಸ್ತರಿಸಬೇಕು. ಉದಾಹರಣೆಗೆ, ಕಾರ್ಮಿಕ, ಕೃಷಿಕ, ಮಹಿಳಾ ಹೋರಾಟಗಳಿಗೆ ಬೆಂಬಲವಾಗಿ ಒಗ್ಗೂಡುವ ಕ್ರಿಯೆ. ಔದ್ಯಮಿಕ ಕ್ಷೇತ್ರಗಳಲ್ಲಿನ ಪಕ್ಷದ ಕಮಿಟಿಗಳು ‘ಶ್ರಮಿಕ ವರ್ಗದ ರಾಜಕೀಕರಣ’ ದಂಥ ಮಾತುಗಳಿಂದಲೂ ಮುಂದೆ ಸಾಗಿ, ಕಾರ್ಖಾನೆ/ಉದ್ಯಮ ತಳಹದಿಯ ಮತ್ತು ಕ್ಷೇತ್ರಕ್ಕನುಸಾರವಾದ ರಾಜಕೀಯ ಚಟುವಟಿಕೆಗಳು ಮತ್ತು ಪಕ್ಷಕಟ್ಟುವ, ತಳಮಟ್ಟದ ಕಾರ್ಯಶೈಲಿಯನ್ನು ದಿನಿತ್ಯದ ಅನುಷ್ಠಾನದಲ್ಲಿ ರೂಢಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮ ಎಲ್ಲಾ ಸಮುದಾಯ ಸಂಘಟನೆಗಳ ಶಕ್ತಿಯನ್ನು ಬಳಸಿಕೊಳ್ಳಬೇಕು.

52. ಸೈದ್ಧಾಂತಿಕ ಮಟ್ಟದಲ್ಲಿ, ಟ್ರೇಡ್ ಯೂನಿಯನ್ ಕಾರ್ಯವನ್ನು ಸಶಕ್ತಗೊಳಿಸುವಾಗ, ಮಾರ್ಗದರ್ಶನ ಮಾಡುವಾಗ, ಶ್ರಮಿಕವರ್ಗದ ಹೋರಾಟವನ್ನು ಕೇವಲ ಟ್ರೇಡ್ ಯೂನಿಯನ್ ಹೋರಾಟಗಳಿಗೆ ಇಳಿಸಿಬಿಡುವ, ಎಡಪಕ್ಷೀಯ ಹೋರಾಟದಲ್ಲಿ ಚೆನ್ನಾಗಿ ಬೇರುಬಿಟ್ಟಿರುವ ಮನೋಭಾವವನ್ನು ದೃಢವಾಗಿ ಎದುರಿಸಿ ನಿವಾರಿಸಬೇಕು. “ಶ್ರಮಿಕ ವರ್ಗದ ಟ್ರೇಡ್ ಯೂನಿಯನ್ ರೀತಿಯ ರಾಜಕೀಯ, ಶ್ರಮಿಕವರ್ಗದ ಬೂರ್ಷ್ವಾ ರಾಜಕೀಯವಲ್ಲದೆ ಬೇರೇನೂ ಅಲ್ಲ” ಎಂದು ಲೆನಿನ್, “ಮಾಡಬೇಕಾದ್ದೇನು? ಎಂಬ ಬಹುಮುಖ್ಯ ಗ್ರಂಥದ “ಪ್ರಜಾತಂತ್ರಕ್ಕಾಗಿ ಹೋರಾಡುವ ಮಂಚೂಣಿ ಹೋರಾಗಾರರಾಗಿ ಶ್ರಮಿಕವರ್ಗ” ಎಂಬ ಮಹತ್ವ ಪೂರ್ಣ ಶೀರ್ಷಿಕೆಯ ಅಧ್ಯಾಯದಲ್ಲಿ ಹೇಳಿದ್ದಾರೆ. ಅವರು ಅತ್ಯಂತ ಮುಖ್ಯವೆಂದು ಹೇಳಿದ್ದು ಕ್ರಾಂತಿಕಾರಕ ರಾಜಕೀಯ ಮತ್ತು ಪಕ್ಷಕಟ್ಟುವಿಕೆ ಎಂಬ ಪ್ರಜ್ಞಾಪೂರ್ವಕ ಅಂಶ. ಸಮುದಾಯದ ಹೋರಾಟಗ ತಾನೇತಾನಾಗಿ ಹುಟ್ಟುವುದು ವ್ಯಾಪಕವಾಗಿದ್ದಷ್ಟೂ ತಾತ್ವಿಕ, ರಾಜಕೀಯ ಮತ್ತು ಸಂಘಟನೆಯ ರೂಪದಲ್ಲಿ ಕಮ್ಯೂನಿಸ್ಟರ ಪ್ರಜ್ಞಾಪೂರ್ವಕ ಪಾತ್ರ ದೊಡ್ಡದಾಗಿರಬೇಕೆಂದು ಲೆನಿನ್ ಒತ್ತಿ ಹೇಳುತ್ತಾರೆ. ದೇಶೀಯವಾಗಿ, ಅಂತಾರ್ದೇಶೀಯವಾಗಿ ಹೆಚ್ಚುತ್ತಲೇ ಇರುವ ಇಂದಿನ ಪ್ರಕ್ಷುಬ್ಧ ಸನ್ನಿವೇಶದಲ್ಲಿ, ಶ್ರಮಿಕ ವರ್ಗದ ಕ್ರಾಂತಿಕಾರೀ ಪಕ್ಷ, ಲೆನಿನ್ನರ ಈ ಮಾತನ್ನು ನೈಜ ಶ್ರದ್ಧೆಯಿಂದ ಪಾಲಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ